BELTHANGADI
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಎಫ್ಐಆರ್ ದಾಖಲು
ದಕ್ಷಿಣಕನ್ನಡ ಮೇ 24: 24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ, ಬೆಳ್ತಂಗಡಿಯ ಹರೀಶ್ ಪೂಂಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಮಿತಾ ಕೆ. ಪೂಜಾರಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಕಲಂ 153, 153ಎ, 505ರ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಕಿನ್ಯಮ್ಮ ಸಭಾಭವನದಲ್ಲಿ ನಡೆದ ಬಿಜೆಪಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಹರೀಶ್ ಪೂಂಜಾ ಕೋಮು ಪ್ರಚೋದಕ ಹಾಗೂ ದ್ವೇಷ ಉಂಟಾಗುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ನಮಿತಾ ಪೂಜಾರಿ ದೂರು ನೀಡಿದ್ದರು.
24 ಹಿಂದೂ ಕಾರ್ಯಕರ್ತರನ್ನು ಸಿದ್ದರಾಮಯ್ಯ ಹತ್ಯೆ ಮಾಡಿದ್ದಾರೆ ಎನ್ನುವ ಮೂಲಕ ಸಿಎಂ ವಿರುದ್ಧವೇ ಕೊಲೆ ಆರೋಪ ಮಾಡಿದ್ದ ಪೂಂಜಾ, ಕಾಂಗ್ರೆಸ್ ಪರ ಪ್ರಚಾರ ನಡೆಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಸತ್ಯಜಿತ್ ಸುರತ್ಕಲ್ ಎಂಬ ಹಿಂದೂ ನಾಯಕ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ, 24 ಹಿಂದೂ ಕಾರ್ಯಕರ್ತರನ್ನ ಹತ್ಯೆ ಮಾಡಿದ ಸಿದ್ದರಾಮಯ್ಯಗೆ ನೀವು ವೋಟ್ ಕೇಳಿದ್ದೀರ, ಬಜರಂಗ ದಳ ಬ್ಯಾನ್ ಮಾಡುತ್ತೇವೆ ಎಂದ ಕಾಂಗ್ರೆಸ್ ಪರ ವೋಟ್ ಕೇಳಿದ್ದೀರ, ನಿಮ್ಮದು ಯಾವ ರೀತಿಯ ಹಿಂದುತ್ವ ಎಂದು ಜನ ಕೇಳುತ್ತಿದ್ದಾರೆ ಎಂದೆಲ್ಲ ಶಾಸಕರು ಭಾಷಣದಲ್ಲಿ ಮಾತಾಡಿದ್ದರ ಹಿನ್ನೆಲೆಯಲ್ಲಿ ದೂರು ನಮಿತಾ ದೂರು ನೀಡಿದ್ದರು.