DAKSHINA KANNADA
ತಿಂಡಿಯ ಹಣ ಕೇಳಿದಕ್ಕೆ ಹೊಟೇಲ್‍ನಲ್ಲಿ ದಾಂಧಲೆ, ಕ್ಯಾಷಿಯರ್ ಕೊಲೆಯತ್ನ
ಉಳ್ಳಾಲ, ಮೇ 18: ಪಾರ್ಸೆಲ್ ತಿಂಡಿ ಪಡೆದ ಹಣವನ್ನು ಕೇಳಿದ ಕ್ಯಾಷಿಯರ್ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೆ, ಹೊಟೇಲಿನೊಳಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮದನಿನಗರದಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಮದನಿನಗರ ಬಳಿಯಿರುವ ಕ್ಯಾಲಿಕಟ್ ಕಿಚನ್‍ಗೆ ಆರೋಪಿಗಳಾದ ಲುಕ್ಮಾನ್, ಅಜ್ಮಾಲ್, ರಿಜ್ವಾನ್, ಇಮ್ರಾನ್, ನವಾಝ್, ನಿಝಾಂ , ಇರ್ಫಾನ್ ಮತ್ತು ತೌಫೀಕ್ ಸೇರಿದಂತೆ ತಂಡ ಬಂದಿತ್ತು. ಇವರು ಹೊರಗಿನಿಂದ ನಿಂತು ತಿಂಡಿ ತಿನಿಸಿಗೆ ಆರ್ಡರ್ ಮಾಡಿದಾಗ ಕ್ಯಾಷಿನಲ್ಲಿದ್ದ ಸತೀಶ್ ಅವರು ತಿಂಡಿಯ ಮೊತ್ತವನ್ನು ಪಾವತಿಸುವಂತೆ ಹೇಳಿದ್ದರು.
ಇದರಿಂದ ರೊಚ್ಚಿಗೆದ್ದ ತಂಡ ಇನ್ನಷ್ಟು ಜನರನ್ನು ಸೇರಿಸಿಕೊಂಡು ಕೈಯಲ್ಲಿ ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೊಟೇಲಿನ ಒಳಗೆ ಅಕ್ರಮವಾಗಿ ಪ್ರವೇಶಿಸಿ ಏ ಬೇವರ್ಸಿಗಳಾ ನಿಮಗೆ ನಾವು ಕೇಳುವಾಗ ಉಚಿತ ತಿಂಡಿ ಕೊಡಲು ಆಗುವುದಿಲ್ಲವಾ? ನಾವು ನಿಮಗೆ ಹಣ ಕೊಡಬೇಕಾ’ ಎಂದು ಬೈಯ್ಯುತ್ತಾ ಕೌಂಟರಿನಲ್ಲಿದ್ದ ಸತೀಶ್ ಅವರ ಮೇಲೆ ಲುಕ್ಮಾನ್ ಎಂಬಾತ ಕೈಯಲ್ಲಿದ್ದ ದೊಣ್ಣೆಯಿಂದ ತಲೆಗೆ ಜೋರಾಗಿ ಬಡಿದಿದ್ದಾರೆ.
ಇದನ್ನು ತಡೆಯಲು ಇತರೆ ಸಿಬ್ಬಂದಿ ಮುಂದಾದಾಗ ಉಳಿದ ಆರೋಪಿಗಳು ಕೈಗಳಲ್ಲಿದ್ದ ಕಲ್ಲು ಮತ್ತು ದೊಣ್ಣೆಗಳಿಂದ ಕಿಟಕಿ ಪಾತ್ರೆಗಳಿಗೆ ಹೊಡೆದು ಹೊಟೇಲಿನ ಟೇಬಲ್, ಚೆಯರ್ ಗಳಿಗೆ ಹೊಡೆದು ಹುಡಿ ಮಾಡಿದ್ದಾರೆ. ಘಟನೆಯಿಂದ ರೂ.20,000 ನಷ್ಟ ಉಂಟಾಗಿದೆ. ಕೃತ್ಯವೆಸಗಿದ ಬಳಿಕ ದೊಣ್ಣೆಗಳನ್ನು ಅಲ್ಲೇ ಬಿಸಾಡಿದ ಆರೋಪಿಗಳು `ನಾವು ಕೋರ್ಟ್ ಪೊಲೀಸ್ ಸ್ಟೇಷನ್ ಗೆ ಹೋಗಿ ಬಂದವರು, ನಾವು ಯಾರಿಗೂ ಹೆದರುವುದಿಲ್ಲ. ನಾಳೆಯಿಂದ ಮತ್ತೆ ಹಣ ಕೇಳಿದರೆ ಸಿಬ್ಬಂದಿಯನ್ನು ಕೊಲೆ ಮಾಡುವುದಾಗಿ ‘ ಬೆದರಿಸಿ ಕೋವಿಡ್ ನಿಯಮಾವಳಿಗಳನ್ನು ಕೂಡ ಉಲ್ಲಂಘಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.