ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡಲು ಪೂರಕ ವಾತಾವರಣ- ಪ್ರಿಯಾಂಕ ಮೇರಿ ಫ್ರಾನ್ಸಿಸ್

ಉಡುಪಿ ಫೆಬ್ರವರಿ 7 : ಉಡುಪಿ ಜಿಲ್ಲೆಯಲ್ಲಿ ಉತ್ತಮವಾಗಿ ಕರ್ತವ್ಯಕ್ಕಾಗಿ ನಿರ್ವಹಿಸಲು ಎಲ್ಲಾ ಸಿಬ್ಬಂದಿ, ಅಧಿಕಾರಿಗಳು ಪೂರಕ ವಾತಾವರಣ ನಿರ್ಮಿಸಿದ್ದು, ಇಲ್ಲಿ ತುಂಬ ಬುದ್ದಿವಂತ ಮತ್ತು ಉತ್ತಮ ಸಹಕಾರ ನೀಡುವ ಸಿಬ್ಬಂದಿ ಇದ್ದಾರೆ ಎಂದು ಬೆಂಗಳೂರಿಗೆ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾಗಿ ಭಡ್ತಿ ಹೊಂದಿ ಉಡುಪಿ ಜಿಲ್ಲೆಯಿಂದ ನಿರ್ಗಮಿಸುತ್ತಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಗುರುವಾರ ರಜತಾದ್ರಿಯ ಅಟಲ್‍ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ.,ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿಗಳ ಸಂಕೀರ್ಣದಲ್ಲಿರುವ ವಿವಿಧ ಇಲಾಖೆಗಳು, ತಾಲೂಕು ಆಡಳಿತ, ತಾ.ಪಂ. ಮೊದಲಾದ ಕಚೇರಿಗಳ ವತಿಯಿಂದ ಏರ್ಪಡಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ 3 ವರ್ಷ 2 ತಿಂಗಳುಗಳ ಕಾಲ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ ತುಂಬ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಇಲ್ಲಿ ಟೀಮ್ ವರ್ಕ್ ಮಾಡುವುದಕ್ಕೆ ಸಾಧ್ಯವಾಗಿದೆ. ಕಳೆದ ಮಳೆಗಾಲದಲ್ಲಿ ನೆರೆ ಬಂದಾಗ, ಚುನಾವಣಾ ಸಮಯದಲ್ಲಿ, ರಾಷ್ಟ್ರಪತಿ ಭೇಟಿ ಮೊದಲಾದ ಸಂದರ್ಭಗಳಲ್ಲಿ ಇದು ಅನುಭವಕ್ಕೆ ಬಂದಿದೆ. ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಯಾರಿಗೇ ಆಗಲಿ ಇಂಥ ಕೆಲಸವನ್ನು ವಹಿಸಿದರೆ ಅದನ್ನು ಪೂರ್ಣ ಪರಿಶ್ರಮದಿಂದ ಸಾಮರ್ಥ್ಯ ಮೀರಿ ಕೆಲಸ ಮಾಡುತ್ತಾರೆ, ಎಲ್ಲರು ಉತ್ತಮ ಸಹಕಾರ, ಬೆಂಬಲ ನೀಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಹೆಫ್ಸಿಬಾ ರಾಣಿ ಅವರಿಗೆ ಕೂಡ ಎಲ್ಲ ಅಧಿಕಾರಿ ಸಿಬ್ಬಂದಿ ಅವರು ಸಹಕಾರ, ಬೆಂಬಲ ನೀಡಿ ಎಂದು ಪ್ರಿಯಾಂಕ ಮೇರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಬಿ. ನಿಂಬರಗಿ ಮಾತನಾಡಿ, ಸರಕಾರಿ ಅಧಿಕಾರಿಗಳು ಬರುವುದು ಹೋಗುವುದು ಸಹಜ. ಆದರೆ ಅವರು ಬಂದು ಹೋಗುವಾಗ ಉಂಟಾಗುವ ಜನರ ಭಾವನೆ ಮುಖ್ಯ. ಕಳೆದ ಒಂದು ವರ್ಷದಲ್ಲಿ ಚುನಾವಣೆ ಸಂದರ್ಭಗಳನ್ನು ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಜನರ ಮನಸ್ಸಿನಲ್ಲಿ ಉಳಿಯುವಂತಹ ಕೆಲಸ ಮಾಡಿ, ಅದರ ಮೂಲಕ ಜನ ಮಾನಸದಲ್ಲಿ ಅಚ್ಚೊತ್ತಿಕೊಂಡು ಇಲ್ಲಿಂದ ಹೆಚ್ಚಿನ ಕರ್ತವ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆಗೆ ಹೊಗುತ್ತಿದ್ದಾರೆ ಎಂದು ಶುಭ ಹಾರೈಸಿದರು.

Facebook Comments

comments