LATEST NEWS
ದೆವ್ವಕ್ಕೆ ಹೆದರಿ ಪೊಲೀಸ್ ಕಾನ್‌ಸ್ಟೇಬಲ್ ಆತ್ಮಹತ್ಯೆ …
ಕುಡ್ಡಲೋರ್, ನವೆಂಬರ್ 17: ದೆವ್ವಕ್ಕೆ ಹೆದರಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಕುಡ್ಡಲೋರ್ ಜಿಲ್ಲೆಯಲ್ಲಿ ನಡೆದಿದೆ.
ಕಲ್ಲಕುರಿಚಿ ಜಿಲ್ಲೆಯ ಪೆರುಂಬಕ್ಕಂ ಮೂಲದ ಪ್ರಭಾಕರನ್ (33) ಅವರು ಪೊಲೀಸ್ ಕ್ವಾರ್ಟರ್ಸ್‌ನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕುಡ್ಡಲೋರ್ ಸಶಸ್ತ್ರ ಪೊಲೀಸ್ ವಿಭಾಗದ ಮೊದಲ ಕಾನ್‌ಸ್ಟೇಬಲ್ ಆಗಿದ್ದ ಪ್ರಭಾಕರನ್, ವಿಷ್ಣುಪ್ರಿಯಾ ಎಂಬುವವರನ್ನು ಮದುವೆಯಾಗಿದ್ದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಕುಡ್ಡಲೋರ್‌ನ ಸಶಸ್ತ್ರ ಪೊಲೀಸ್ ಠಾಣೆಯ ಕ್ವಾರ್ಟರ್ಸ್‌ನಲ್ಲಿ ಈ ಕುಟುಂಬ ವಾಸಿಸುತ್ತಿತ್ತು. ಕೆಲವು ದಿನಗಳಿಂದ ಪ್ರಭಾಕರನ್ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನು ಕೂಡ ಪಡೆಯುತ್ತಿದ್ದರು. ಇತ್ತೀಚೆಗೆ ಪ್ರಭಾಕರನ್ ಅವರು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವ ಮಹಿಳೆಯೊಬ್ಬಳು ತನ್ನ ಕತ್ತು ಹಿಸುಕು ಕೊಲ್ಲಲು ಪ್ರಯತ್ನಿಸುತ್ತಿರುವ ಕನಸು ಕಂಡಿದ್ದಾಗಿ ಹೇಳಿಕೊಂಡಿದ್ದರು.
ಇದನ್ನು ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ, ಭವಿಷ್ಯ ಹೇಳುವವರನ್ನು ಸಂಪರ್ಕಿಸಿ ಅವರ ಸಹಾಯ ಕೋರಿದ್ದರು. 15 ದಿನಗಳ ಅನಾರೋಗ್ಯ ರಜೆಯನ್ನು ತೆಗೆದುಕೊಂಡು ಮನೆಯ ಪೂಜಾ ಕೊಠಡಿ ಒಳಗೆ ಬಾಗಿಲು ಹಾಕಿಕೊಂಡು ಕುಳಿತಿದ್ದರು.
ಮೇಲ್ಪಟ್ಟಂಬಕ್ಕಂನಲ್ಲಿ ಸಂಬಂಧಿಕರೊಬ್ಬರ ಮನೆಯ ಸಮಾರಂಭಕ್ಕೆ ಪತ್ನಿ ಹಾಗೂ ಮಕ್ಕಳನ್ನು ಕಳುಹಿಸಿದ್ದ ಅವರು, ಮನೆಯಲ್ಲಿ ಒಂಟಿಯಾಗಿದ್ದರು. ಸಮಾರಂಭ ಮುಗಿಸಿದ ಪತ್ನಿ ಮನೆಗೆ ಹಿಂದಿರುಗಿದಾಗ ಪ್ರಭಾಕರನ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪ್ರಭಾಕರನ್ ಅವರನ್ನು ಕೂಡಲೇ ಕೆಳಕ್ಕಿಳಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು. ಬಳಿಕ ಪೊಲೀಸರು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದರು.
ಪ್ರಭಾಕರನ್ ಅವರು ದೆವ್ವಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಡ್ಡಲೋರ್ ನ್ಯೂ ಟೌನ್ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ತನ್ನನ್ನು ದೆವ್ವ ಹಿಂಬಾಲಿಸುತ್ತಿದೆ ಮತ್ತು ಕಾಡುತ್ತಿದೆ ಎಂದು ಪ್ರಭಾಕರನ್ ಬಹಳ ಹೆದರಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಈ ಹಿಂದೆ ಇದೇ ಭಾಗದಲ್ಲಿನ ಸಶಸ್ತ್ರ ಪಡೆಗಳ ಕ್ವಾರ್ಟರ್ಸ್‌ನಲ್ಲಿ ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.