DAKSHINA KANNADA
ಖ್ಯಾತ ಹಿರಿಯ ಕಾದಂಬರಿಕಾರ ಕೆ.ಟಿ.ಗಟ್ಟಿ(86) ನಿಧನ..!
ಮಂಗಳೂರು : ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ ಕೆ.ಟಿ.ಗಟ್ಟಿ ನಿಧನರಾಗಿದ್ದಾರೆ. 86 ವರ್ಷದ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಅವರಿಗೆ ಪತ್ನಿ, ನಿವೃತ್ತ ಶಿಕ್ಷಕಿ ಯಶೋದಾ, ಪುತ್ರ ನಿಟ್ಟೆ ವಿವಿಯಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕ ಸತ್ಯಜಿತ್, ಪುತ್ರಿಯರಾದ ಅಮೆರಿಕದಲ್ಲಿ ಪರಿಸರ ವಿಜ್ಞಾನಿಯಾಗಿರುವ ಪ್ರಿಯದರ್ಶಿನಿ, ಆಸ್ಟ್ರಿಯಾದಲ್ಲಿ ಆಂಥ್ರಾಪಾಲಜಿಸ್ಟ್ ಆಗಿರುವ ಚಿತ್ ಪ್ರಭಾ ಇದ್ದಾರೆ.
ಕಾಸರಗೋಡು ಸಮೀಪದ ರಾಮದಾಸನಗರದಲ್ಲಿ 1938ರ ಜುಲೈ 22 ರಂದು ಜನಿಸಿದ ಕೆ.ಟಿ.ಗಟ್ಟಿ ಅವರು ಈಚೆಗೆ ದಕ್ಷಿಣ ಕನ್ನಡದಲ್ಲಿ ನೆಲೆಸಿದ್ದರು. ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ಕೇರಳದಲ್ಲಿ ಪಿಡಿಸಿ (ಪ್ರಿ ಡಿಗ್ರಿ ಕೋರ್ಸ್) ಹಾಗೂ ಬಿ.ಎ ಪದವಿ ಗಳಿಸಿದರು. ಕಾಸರಗೋಡು ತಾಲ್ಲೂಕಿನ ಮಾಯಿಪ್ಪಾಡಿಯ ಬೇಸಿಕ್ ಟ್ರೇನಿಂಗ್ ಶಾಲೆ ಮತ್ತು ತಲಶ್ಶೇರಿ ಟ್ರೇನಿಂಗ್ ಕಾಲೇಜಿನಲ್ಲಿ ಬಿ.ಎಡ್ ಪದವಿ ಪಡೆದರು.
ಕಾಸರಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಆರಂಭಿಸಿ, ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. 1968ರಿಂದ ಮಣಿಪಾಲದ ಎಂಐಟಿ ಸಂಸ್ಥೆಯಲ್ಲಿ ಮತ್ತು ಉಡುಪಿಯ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು.
ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ ಇವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದರು.
ಇಥಿಯೋಪಿಯದಿಂದ ಹಿಂತಿರುಗಿದ ನಂತರ ಅವರು ಉಜಿರೆಯಲ್ಲಿ ವಾಸವಾಗಿ ಕೃಷಿಯಲ್ಲಿ ತೊಡಗಿದ್ದರು.
ಶಬ್ದಗಳು (೧೯೭೬), ಸೌಮ್ಯ (೧೯೭೮), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಹೀಗೆ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ.