DAKSHINA KANNADA
ದರೋಡೆ ನಾಟಕವಾಡಿ ಪೋಲೀಸ್ ಅತಿಥಿಯಾದ ಲಾರಿ ಚಾಲಕ

ದರೋಡೆ ನಾಟಕವಾಡಿ ಪೋಲೀಸ್ ಅತಿಥಿಯಾದ ಲಾರಿ ಚಾಲಕ
ಪುತ್ತೂರು ಎಪ್ರಿಲ್ 3: ಲಾರಿಯಲ್ಲಿದ್ದ ಸಾಮಾನುಗಳನ್ನು ಹೆದ್ದಾರಿಯಲ್ಲಿ ದರೋಡೆ ಮಾಡಲಾಗಿದೆ ಎಂದು ನಾಟಕವಾಗಿ ಪೊಲೀಸರಿಗೆ ದೂರು ನೀಡಿದ್ದ ಲಾರಿ ಚಾಲಕ ಈಗ ದರೋಡೆ ಪ್ರಕರಣದಲ್ಲಿ ಪೊಲೀಸ್ ಅತಿಥಿಯಾಗಿರುವ ಘಟನೆ ನಡೆದಿದೆ.
ಬಂಧಿತ ಲಾರಿ ಚಾಲಕನನ್ನು ಅಂಬರೀಶ್ ಎಂದು ಗುರುತಿಸಲಾಗಿದೆ. ಈತ ಚಿಕ್ಕಬಳ್ಳಾಪುರದ ಹಿಂದೂಸ್ತಾನ ಲಿವರ್ ಕಂಪೆನಿಯಿಂದ ಸಾಬೂನು,ಶ್ಯಾಂಪೋ, ಟೀಪುಡಿ, ಕಾಫಿಪುಡಿ, ಪ್ಯಾಕೇಟ್ ಗಳನ್ನು ತನ್ನ ಲಾರಿಯಲ್ಲಿ ಲೋಡ್ ಮಾಡಿಕೊಂಡು ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಡೆಲಿವರಿ ಮಾಡಬೇಕಾಗಿತ್ತು.

ಆದರೆ ಲಾರಿ ಡ್ರೈವರ್ ಅಂಬರೀಶ್ ಮಾರ್ಚ್ ತಿಂಗಳ 25 ರಂದು ಮಧ್ಯರಾತ್ರಿ ಸಂದರ್ಭಲ್ಲಿ ರಾಜ್ಯ ಹೆದ್ದಾರಿಯ ಗೋಳಿತೊಟ್ಟು ಗ್ರಾಮದ ಶಿರಡಿಗುಡ್ಡೆ ಎಂಬಲ್ಲಿ ಇಂಡಿಕಾ ಕಾರ್ ನಲ್ಲಿ ಬಂದ ದುಷ್ಕರ್ಮಿಗಳನ್ನು ತನ್ನ ಕೈಕಾಲು ಕಟ್ಟಿ ಲಾರಿಯಲ್ಲಿದ್ದ ಸಾಮಾನುಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ.
ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಇದೊಂದು ಹೆದ್ದಾರಿ ದರೋಡೆ ಪ್ರಕರಣವಾದ ಹಿನ್ನಲೆಯಲ್ಲಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ತನಿಖೆ ಸಂದರ್ಭ ಈ ದರೋಡೆ ಪ್ರಕರಣದಲ್ಲಿ ಲಾರಿ ಡ್ರೈವರ್ ಕೈವಾಡವಿರುವ ಸಂಶಯ ಹಿನ್ನಲೆಯಲ್ಲಿ ಪೊಲೀಸರು ಲಾರಿ ಡ್ರೈವರ್ ಅಂಬರೀಶ್ ನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಸಂದರ್ಭ ಲಾರಿ ಡ್ರೈವರ್ ತಾನೆ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಂಬರೀಶ್ ಲಾರಿ ಮಾಲಕನಾಗಿದ್ದು ವಿಪರೀತ ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದ್ದು, ಸಾಲ ತೀರಿಸಲು ಈ ರೀತಿ ದರೋಡೆ ಕೆಲಸಕ್ಕೆ ಕೈಹಾಕಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಲಾರಿಯಲ್ಲಿರುವ ಸಾಮಾನುಗಳನ್ನು ಚೆನ್ನಪಟ್ಟಣದಲ್ಲಿರುವ ಅಂಗಡಿಯೊಂದಕ್ಕೆ ಮಾರಿರುವುದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟು ದರೋಡೆಗೊಳಗಾದ ಸೊತ್ತು ಮೌಲ್ಯ 58,867/- ರೂಪಾಯಿ ಎಂದು ಅಂದಾಜಿಸಲಾಗಿದ್ದು, ಆರೋಪಿ 51,500/- ರೂಪಾಯಿ ಸೊತ್ತುಗಳನ್ನು ಮಾರಾಟ ಮಾಡಿದ್ದು, ಆರೋಪಿಯಿಂದ ಈ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.