ಉಡುಪಿಯಲ್ಲಿ ಮಹಿಳೆಯರ ರಕ್ಷಣೆಗೆ ಸಿದ್ದವಾದ ಅಬ್ಬಕ್ಕ ಪಡೆ

ಉಡುಪಿ ಎಪ್ರಿಲ್ 2: ಉಡುಪಿಯಲ್ಲಿ ಮಹಿಳೆಯರ ಸುರಕ್ಷತೆಗೆ ಪೊಲೀಸ್ ಇಲಾಖೆ ಹೊಸದೊಂದು ತಂಡ ಕಟ್ಟಿದ್ದಾರೆ. ನಗರದಲ್ಲಿ ಹೆಣ್ಣುಮಕ್ಕಳು ಒಬ್ಬಂಟಿಯಾಗಿದ್ದಾರೆ ಎಂದು ಕೆಣಕಲು ಹೊಗುವ ಪುಢಾರಿಗಳಿಗೆ ಸರಿಯಾದ ಪಾಠ ಕಲಿಸಲು ಈ ಪಡೆ ರೆಡಿಯಾಗಿದ್ದು, ಉಡುಪಿಯ ನೂತನ ಎಸ್ಪಿ ನಿಶಾ ಜೇಮ್ಸ್ ಈ ಪಡೆಯನ್ನು ಕಟ್ಟಿದ್ದಾರೆ.

ಉಡುಪಿ ಜಿಲ್ಲೆಗೆ ನಿಶಾ ಜೇಮ್ಸ್ ಎಸ್‍ಪಿ ಆಗಿ ಬಂದ ಮೇಲೆ ಮಹಿಳಾ ಪೊಲೀಸರ ಒಂದು ತಂಡವನ್ನು ಕಟ್ಟಿದ್ದಾರೆ. ಆ ಟೀಂ ಹೆಸರು ಅಬ್ಬಕ್ಕ ಪಡೆ. ಈ ತಂಡದಲ್ಲಿ ಮಹಿಳಾ ಎಸ್‍ಐ, ಪೇದೆ ಇರುತ್ತಾರೆ. ಈ ಪಡೆಯ ಪೊಲೀಸರು ಜನ ನಿಬಿಡ ಪ್ರದೇಶದಲ್ಲಿ ಓಡಾಡುತ್ತಿರುತ್ತಾರೆ.

ಸಮಾವೇಶಗಳು- ಸಾರ್ವಜನಿಕ ಸಭೆಗಳು ನಡೆಯುವಲ್ಲಿ ಈ ಅಬ್ಬಕ್ಕ ಪಡೆ ಮಹಿಳೆಯ ರಕ್ಷಣೆಗೆ ಹಾಜರಿರುತ್ತದೆ. ಬೆಳಗ್ಗೆ ಸಂಜೆ ಬಸ್ ನಿಲ್ದಾಣ- ಮಾರುಕಟ್ಟೆ ಪ್ರದೇಶಗಳಲ್ಲಿ ಈ ಟೀಂ ಓಡಾಡುತ್ತಿರುತ್ತದೆ. ಚಾಲಕ ಒಬ್ಬ ಬಿಟ್ಟು ಅಬ್ಬಕ್ಕ ಪಡೆಯಲ್ಲಿ ಎಲ್ಲ ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದು ತಂಡಕ್ಕೊಂದು ಗಸ್ತು ವಾಹನ ಕೊಡಲಾಗಿದೆ.

ಚಿತ್ರದುರ್ಗದಲ್ಲಿ ಓಬವ್ವ ಪಡೆ, ಸಾಗರದಲ್ಲಿ ಕೆಳದಿ ಚೆನ್ನಮ್ಮ ಪಡೆಯನ್ನು ರಚನೆ ಮಾಡಲಾಗಿತ್ತು. ಮಹಿಳೆಯರಿಗೆ ತೊಂದರೆ ಕೊಡುವ ಘಟನೆ ನಡೆದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಪಿಎಸ್‍ಐ, ಎಎಸ್‍ಐ, ಮಹಿಳಾ ಸ್ಟಾಫ್ ತಂಡದಲ್ಲಿ ಇರುತ್ತಾರೆ. ಕ್ರಿಮಿನಲ್ ಚಟುವಟಿಕೆ ನಡೆದರೆ ಸ್ಥಳದಲ್ಲೇ ಕೇಸ್ ದಾಖಲಿಸುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ ಎಂದು ಎಸ್‍ಪಿ ನಿಶಾ ಜೇಮ್ಸ್ ಹೇಳಿದ್ದಾರೆ.