DAKSHINA KANNADA
ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ- ಹಣಕ್ಕೆ ಬೇಡಿಕೆ: ಹಣ ಪಾವತಿಸದಂತೆ ತಾಲೂಕು ದಂಡಾಧಿಕಾರಿ ಮನವಿ.

ಪುತ್ತೂರು, ಮೇ 27: ಪುತ್ತೂರು ತಾಲೂಕು ಕಾರ್ಯ ನಿರ್ವಾಹಕ ದಂಡಾಧಿಕಾರಿಯವರೂ ಆಗಿರುವ ತಹಶೀಲ್ದಾರ್ ಟಿ.ರಮೇಶ್ ಬಾಬುರವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಡುತ್ತಿರುವ ಘಟನೆ ನಡೆದಿದೆ.
ತಹಶೀಲ್ದಾರ್ ರಮೇಶ್ ಬಾಬುರವರ ಹೆಸರಿನಲ್ಲಿ ಇತ್ತೀಚೆಗೆ ಯಾರೋ ಫೇಸ್ಬುಕ್ ಖಾತೆ ತೆರೆದಿದ್ದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗಿತ್ತು. ರಿಕ್ವೆಸ್ಟ್ ಒಪ್ಪಿದ ಗ್ರಾಮಕರಣಿಕರು, ಸಾಮಾಜಿಕ ಕಾರ್ಯಕರ್ತರು ಸಹಿತ ಹಲವರಿಗೆ ಇದೇ ಫೇಸ್ಬುಕ್ ಅಕೌಂಟಿನಿಂದ ಸಂದೇಶ ಕಳುಹಿಸಿ ತುರ್ತಾಗಿ ಹಣ ಬೇಕಿರುವುದರಿಂದ ತಕ್ಷಣ ಗೂಗಲ್ ಪೇ ಮಾಡುವಂತೆ ಕೇಳಲಾಗುತ್ತಿದೆ.

ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಜಗದೀಶ ಕಜೆರವರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ತಹಶೀಲ್ದಾರ್ ಅವರಲ್ಲಿ ವಿಚಾರಿಸಿದಾಗ ‘ನನ್ನ ಹೆಸರಲ್ಲಿ ಯಾರೋ ನಕಲಿ ಫೇಸ್ಬುಕ್ ಖಾತೆ ಸೃಷ್ಠಿಸಿ ಹಣಕ್ಕೆ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದೆ. ಯಾರೂ ಹಣ ಪಾವತಿ ಮಾಡಬಾರದು’ ಎಂದು ವಿನಂತಿಸಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆಗೆ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ.