LATEST NEWS
ನಕಲಿ ಫೇಸ್ ಬುಕ್ ಅಕೌಂಟ್.. ಪೊಲೀಸ್ ಅಧಿಕಾರಿಗಳೇ ಇವರ ಟಾರ್ಗೆಟ್…ಕೈಕಟ್ಟಿ ಕುಳಿತ ಸೈಬರ್ ಕ್ರೈಂ ಇಲಾಖೆ
ಉಡುಪಿ ಜನವರಿ 13: ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಸಾಮಾಜಿಕ ಖಾತೆ ತೆರೆದು ಹಣ ವಸೂಲಿ ಮಾಡುವ ದಂಧೆ ಈಗ ವ್ಯಾಪಕವಾಗಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳೇ ಅತಿ ಹೆಚ್ಚಾಗಿ ಈ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಬ್ಬ ಅಧಿಕಾರಿ ಹೆಸರಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ನಕಲಿ ಫೇಸ್ಬುಕ್ ಅಕೌಂಟ್ ತೆರೆಯಲಾಗಿದೆ. ನಾಲ್ಕು ದಿನಗಳ ಹಿಂದೆ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಅವರ ಹೆಸರಲ್ಲಿ ಮಂಜುನಾಥ ಸಿಪಿಐ ಎಂಬ ಹೆಸರಲ್ಲಿ ಫೇಸ್ಬುಕ್ ಅಕೌಂಟ್ ಓಪನ್ ಆಗಿತ್ತು. ಈ ಅಕೌಂಟ್ ಬಳಸಿಕೊಂಡು ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇರಿಸುವ ಮೆಸೇಜುಗಳನ್ನು ಕಳುಹಿಸಲಾಗಿತ್ತು. ಈ ಬಗ್ಗೆ ತಕ್ಷಣವೇ ಮಾಹಿತಿ ಪಡೆದ ಮಂಜುನಾಥ್ ಅವರು CEN ಪೋಲೀಸ್ ಸ್ಟೇಷನ್ನಿಗೆ ದೂರನ್ನು ದಾಖಲಿಸಿದ್ದರು. ಬಳಿಕ ಅಕೌಂಟ್ ಡಿ ಆಕ್ಟಿವ್ ಆಗಿತ್ತು.
ಇದೀಗ ಎರಡನೇ ಬಾರಿಗೆ ಇದೇ ಅಧಿಕಾರಿಯ ಹೆಸರಲ್ಲಿ ಮತ್ತೊಂದು ಫೇಸ್ಬುಕ್ ಅಕೌಂಟ್ ತೆರೆಯಲಾಗಿದೆ. ಮತ್ತೊಂದಷ್ಟು ಸ್ನೇಹಿತರಿಗೆ ಹಣಕ್ಕಾಗಿ ಬೇಡಿಕೆ ಇರಿಸಲಾಗಿದೆ. ಪೊಲೀಸರನ್ನೇ ಉದ್ದೇಶವಾಗಿಟ್ಟುಕೊಂಡು ಹಣ ವಸೂಲಿ ದಂಧೆಗೆ ಇಳಿದಿರುವ ವ್ಯಕ್ತಿ ಯಾರು? ಪೊಲೀಸರ ಭಯವೇ ಇಲ್ಲ ಎಂದಾದರೆ ಇನ್ನು ಸಾಮಾನ್ಯ ಜನರ ಪಾಡೇನು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.