BANTWAL
ವಿಟ್ಲ – ಇಡಿ ಅಧಿಕಾರಿಗಳೆಂದು ನಂಬಿಸಿ ಉದ್ಯಮಿ ಮನೆಯಿಂದ 30 ಲಕ್ಷ ಹಣ ಲೂಟಿ
ಪುತ್ತೂರು ಜನವರಿ 04: ಜಾರಿ ನಿರ್ದೇಶನಾಲಯದ ಅಧಿಕಾರಿಗಳೆಂದು ನಂಬಿಸಿ ಉದ್ಯಮಿಯೊಬ್ಬರ ಮನೆ ಮೇಲೆ ದಾಳಿ ನಡೆಸಿ 30 ಲಕ್ಷ ಹಣ ಲೂಟಿ ಮಾಡಿರುವ ಘಟನೆ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಸುಲೈಮಾನ್ ಹಾಜಿ ಅವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ.
ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿ ನಲ್ಲಿ ಆಗಮಿಸಿದ ತಂಡ ,ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳವರೆಗೆ ತನಿಖೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿದ್ದ ಸುಮರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದರು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
ಸ್ಥಳೀಯರ ಪ್ರಕಾರ ಮನೆ ಮಂದಿಗೆ ಹಲ್ಲೆ ನಡೆಸಿ ಹಣ ದರೋಡೆ ಮಾಡಿರುವ ಸಾಧ್ಯತೆ ಇದ್ದು, ಗೋಣಿಯಲ್ಲಿ ಹಣ ತುಂಬಿಸಿಕೊಂಡು ಹೋಗಿರುವ ಶಂಕೆ ಇದೆ, ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಯಾವುದೇ ರೀತಿಯ ಮಾಹಿತಿ ನೀಡಲು ಮನೆಯವರು ನಿರಾಕರಿಸಿದ್ದಾರೆ. ಕುಗ್ರಾಮದಲ್ಲಿರುವ ಬೃಹತ್ ಬಂಗಲೆ ಇದಾಗಿದ್ದು, ಮನೆಯಲ್ಲಿ ಹಣ ಇರುವ ಮಾಹಿತಿ ಪಡೆದೇ ದರೋಡೆ ನಡೆಸಿರುವ ಸಾಧ್ಯತೆ ಇದೆ. ಈ ದರೋಡೆ ಪ್ರಕರಣದಲ್ಲಿ ಸ್ಥಳೀಯ ಕದೀಮರ ಕೈವಾಡ ಸಾಧ್ಯತೆ ಇದ್ದು, ಸ್ಥಳಕ್ಕೆ ದ.ಕ ಜಿಲ್ಲಾ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.