Connect with us

LATEST NEWS

ಯುಟ್ಯೂಬ್ ನೋಡಿ ಖೋಟಾ ನೋಟು ಪ್ರಿಂಟ್ – ಮಂಗಳೂರಿನಲ್ಲಿ 500ರ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ನಾಲ್ವರು ಅರೆಸ್ಟ್

ಮಂಗಳೂರು ಅಗಸ್ಟ್ 19: ಯುಟ್ಯೂಬ್ ನಲ್ಲಿ ಖೋಟಾ ನೋಟು ಪ್ರಿಂಟ್ ಮಾಡುವುದು ಹೇಗೆ ಎಂದು ಕಲಿತು 500 ರ ಖೋಟಾನೋಟು ಪ್ರಿಂಟ್ ಮಾಡಿ ಅದನ್ನು ಚಲಾವಣೆಗೆ ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೊಮವಾರ ಬಂಧಿಸಿದ್ದಾರೆ. ಅವರಿಂದ 427 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.


ಬಂಧಿತರನ್ನು ಕೇರಳದ ಕಾಸರಗೋಡು ಜಿಲ್ಲೆಯ ಕೊಳತ್ತೂರಿನ ವಿ.ಪ್ರಿಯೇಶ್ (38), ಮಲ್ಲ ಗ್ರಾಮದ ‌ಮುಳಿಯಾರಿನ ವಿನೋದ್ ಕುಮಾರ್‌ ಕೆ. (33), ಪೆರಿಯದ ಕುನಿಯಾ ವಡಂಕುಂಕರದ ಅಬ್ದುಲ್ ಖಾದರ್ ಎಸ್.ಎ (58) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಬೆಳಿಯೂರು ಕಟ್ಟೆಯ ಆಯೂಬ್ ಖಾನ್‌ (51) ಎಂದು ಗುರುತಿಸಲಾಗಿದೆ. ‘ಆರೋಪಿಗಳಿಂದ ಸುಮಾರು 2.13 ಲಕ್ಷ ಖೋಟಾನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಈಗಾಗಲೇ ಖೋಟಾ ನೋಟು ಚಲಾವಣೆ ಮಾಡಿದ್ದರೇ ಎಂಬುದು ಸಮಗ್ರ ತನಿಖೆಯ ಬಳಿಕವಷ್ಟೇ ಗೊತ್ತಾಗಲಿದೆ’ ಎಂದರು.


ಆರೋಪಿ ಪ್ರಿಯೇಶ್ ಕಾಸರಗೋಡು ಜಿಲ್ಲೆಯ ಚೆರ್ಕಳದಲ್ಲಿ ಮುದ್ರಣಾಲಯವನ್ನು ಹೊಂದಿದ್ದು, ಅಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ. ಅದಕ್ಕೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಯಿಕ್ಕೋಡ್‌ ಮತ್ತು ದೆಹಲಿಯಿಂದ ಖರೀದಿಸಿದ್ದ. ಸಾಲದ ಸುಳಿಗೆ ಸಿಲುಕಿದ್ದ ಆತ ಖೋಟಾ ನೋಟುಗಳನ್ನು ತಯಾರಿಸುವ ವಿಧಾನವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸಿದ್ದ. ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ಈ ಕೃತ್ಯದಲ್ಲಿ ತೊಡಗಿದ್ದ. ಆತನಿಗೆ ವಿನೋದ್‌ ಪರಿಚಯವಿತ್ತು. ವಿನೋದ್‌ ಮೂಲಕ ಅಬ್ದುಲ್ ಖಾದರ್‌ ಹಾಗೂ ಆತನ ಮೂಲಕ ಆಯೂಬ್ ಖಾನ್‌ ಪರಿಚಯವಾಗಿದ್ದರು. ಆರೋಪಿಗಳು ಖೋಟಾ ನೋಟುಗಳನ್ನು ಪ್ರಿಯೇಶ್‌ನಿಂದ ತರಿಸಿಕೊಂಡು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸಿದ್ದರು. ಪ್ರಿಯೇಶ್‌ ₹ 25 ಸಾವಿರ ಪಡೆದು, ಪ್ರತಿಯಾಗಿ ₹ 500 ಮುಖ ಬೆಲೆಯ ಖೋಟಾ ನೋಟು ( ₹ 1 ಲಕ್ಷ ) ನೀಡಲು ಒಪ್ಪಿದ್ದ. ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಿದ್ದೇವೆ’ ಎಂದರು.

ಅವರು ಮುದ್ರಿಸಿದ್ದ ಖೋಟಾ ನೋಟುಗಳು ಅಸಲಿ ನೋಟಿನಂತೆಯೇ ತೋರುತ್ತಿವೆ. ಅದನ್ನು ಬರಿಗಣ್ಣಿನಲ್ಲಿ ಪತ್ತೆಹಚ್ಚುವುದು ಬಹಳ ಕಷ್ಟ. ಗುಣಮಟ್ಟದ ಕಾಗದ ಹಾಗೂ ಶಾಯಿಯನ್ನು ಬಳಸಿ ಅವುಗಳನ್ನು ಮುದ್ರಿಸಲಾಗಿದೆ. ಆದರೆ ನೋಟು ಎಣಿಸುವ ಯಂತ್ರಗಳಿಂದ ಅವುಗಳನ್ನು ಪತ್ತೆ ಹಚ್ಚಬಹುದು’ ಎಂದು ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *