KARNATAKA
ದೇಣಿಗೆ ಕೇಳಿದ ಶಿಕ್ಷಕಿ, ಅವರಿಂದಲೇ ₹48 ಲಕ್ಷ ದೋಚಿದ ಭೂಪ..
ಶಿವಮೊಗ್ಗ: ಸೈಬರ್ ಕ್ರೈಂಗಳಿಗೆ ಕುರಿತಂತೆ ದಿನನಿತ್ಯವೂ ಹಲವಾರು ವರದಿಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಲೇ ಇರುತ್ತವೆ.
ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿಯೋ, ವಾಟ್ಸ್ಆ್ಯಪ್ಗಳಲ್ಲಿ ಸಂದೇಶ ಕಳುಹಿಸಿಯೋ, ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡೋ… ಹೀಗೆ ಹತ್ತಾರು ಬಗೆಯಲ್ಲಿ ಮೋಸ ಮಾಡುವ ದೊಡ್ಡ ಜಾಲವೇ ಇದ್ದು, ಇದರಿಂದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿರುವವರ ಸುದ್ದಿ ಬರುತ್ತಿದ್ದರೂ, ಜನರು ಮಾತ್ರ ಯಾಕೋ ಎಚ್ಚೆತ್ತುಕೊಂಡಂತೆ ಕಾಣಿಸುವುದೇ ಇಲ್ಲ.
ಅದರಲ್ಲಿಯೂ ವಿದ್ಯಾವಂತರೇ ಇದರ ಜಾಲದೊಳಗೆ ಬೀಳುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ.
ಅಂಥದ್ದೇ ಒಂದು ವಂಚನೆ ಶಿವಮೊಗ್ಗ ಜಿಲ್ಲೆಯ ಸಾಗರದ ಶಾಲೆಯೊಂದರ ಮುಖ್ಯಶಿಕ್ಷಕಿಗೆ ಆಗಿದ್ದು, 48 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ!
ಸಾಗರದಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಶಿಕ್ಷಕಿಯೊಬ್ಬರು ಶಾಲೆ ನಡೆಸಲು ದಾನಿಗಳಿಂದ ಹಣ ಸಂಗ್ರಹಿಸಲು ಬಯಸಿದ್ದರು. ಈ ಸಂಬಂಧ ಅವರು ಫೇಸ್ಬುಕ್ ಮೊರೆ ಹೋಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯ ಉದ್ದೇಶಕ್ಕಾಗಿ ಹಣದ ಹರಿವು ಬಂದಿರುವ ಸಾಕಷ್ಟು ಉದಾಹರಣೆಗಳು ಇವೆ. ಅದನ್ನೇ ನಂಬಿ ಇವರೂ ಕೂಡ ತಮ್ಮ ಉದ್ದೇಶವನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.
ಅದೇ ವೇಳೆ ಡಾ. ಮಾರ್ಕ್ ಡೊನಾಲ್ಡ್ ಎಂಬ ಪ್ರೊಫೈಲ್ ಹೆಸರು ಹೊಂದಿರುವಾತ ಇವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾನೆ. ಶಿಕ್ಷಕಿ ಕೂಡ ಹಿಂದೆ ಮುಂದೆ ನೋಡದೇ ಅಕ್ಸೆಪ್ಟ್ ಮಾಡಿಕೊಂಡಿದ್ದಾರೆ. ಇವರು ಹಾಕಿರುವ ದೇಣಿಗೆ ಪೋಸ್ಟ್ ಕುರಿತಂತೆ ಚಾಟ್ ಮಾಡುವ ಮೂಲಕ ಮಾತನಾಡಿದ್ದಾನೆ ಆತ.
ಇದೇ ವೇಳೆ ತಮ್ಮಲ್ಲಿರುವ ಹಣ, ತಮಗೆ ಇನ್ನೆಷ್ಟು ಹಣ ಬೇಕು ಎಂಬಿತ್ಯಾದಿ ಮಾಹಿತಿಯನ್ನು ಶಿಕ್ಷಕಿ ನೀಡಿದ್ದಾರೆ. ಈ ವಂಚಕನಿಗೆ ಅಷ್ಟೇ ಸಾಕಾಯಿತು. ತಾನು ಅನುದಾನ ನೀಡುವುದಾಗಿ ಆತ ನಂಬಿಸಿದ, ಆತನನ್ನು ಇವರು ನಂಬಿದರು.
ವಿದೇಶಿ ಕರೆನ್ಸಿಯನ್ನು ಭಾರತದ ರೂಪಾಯಿಗೆ ವರ್ಗಾಯಿಸಲು ಹಣ ಭರಿಸಬೇಕಾಗುತ್ತದೆ ಎಂದು 3 ತಿಂಗಳುಗಳಿಂದ ಮುಖ್ಯ ಶಿಕ್ಷಕಿಯಿಂದ 47.84 ಲಕ್ಷ ರೂ.ಗಳನ್ನು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾನೆ ಆತ! ಅವನು ಹೇಳಿದಾಗಲೆಲ್ಲವೂ ಹಣ ನೀಡಿರುವ ಶಿಕ್ಷಕಿಗೆ ಈಗ ತಾವು ಮೋಸ ಹೋಗಿರುವುದು ತಿಳಿದಿದೆ. ಈ ಸಂಬಂಧ ಶಿವಮೊಗ್ಗ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.