DAKSHINA KANNADA
ಬಿಜೆಪಿ ಅವಧಿಯ ಕಾಮಗಾರಿಯನ್ನು ತನ್ನದೆಂದು ಬಿಂಬಿಸುವ ಶಾಸಕರದು ಮೂರ್ಖತನದ ನಡೆ – ಮಾಜಿ ಶಾಸಕ ಮಠಂದೂರು

ಪುತ್ತೂರು ಮಾರ್ಚ್ 19: ಪುತ್ತೂರಿನಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಮಧ್ಯೆ ಅನುದಾನದ ವಾರ್ ಪ್ರಾರಂಭವಾಗಿದ್ದು, ಪುತ್ತೂರು ತಾಲೂಕಿನ ಕುಡಿಯುವ ನೀರಿನ ಯೋಜನೆಯ ಬಗ್ಗೆ ಶಾಸಕರ ಹೇಳಿಕೆಗೆ ಶಾಸಕರಿಗೆ ದಾಖಲೆ ಸಮೇತ ಮಾಜಿ ಶಾಸಕ ಸಂಜೀವ ಮಠಂದೂರು ತಿರುಗೇಟು ನೀಡಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತೂರು, ಬಂಟ್ವಾಳ ಮತ್ತು ಕಡಬ ತಾಲೂಕಿಗೆ ಒಳಪಟ್ಟ ಕುಡಿಯುವ ನೀರಿನ ಬಹುಗ್ರಾಮ ಯೋಜನೆ, ಈ ಯೋಜನೆಯನ್ನು ಬಿಜೆಪಿ ಸರಕಾರ ಇರುವ ಸಂದರ್ಭದಲ್ಲಿ ಮಂಜೂರಾಗಿದ್ದು, ಪುತ್ತೂರಿಗೆ 780 ಕೋಟಿ ಮತ್ತು ಕಡಬ,ಬಂಟ್ವಾಳ ತಾಲೂಕಿನ ಕಾಮಗಾರಿಗೆ 230 ಕೋಟಿ ಬಿಡುಗಡೆಯಾಗಿದೆ ಎಂದರು. ಆದರೆ ರೆ ಇತ್ತೀಚಿನ ದಿನಗಳಲ್ಲಿ ಶಾಸಕರು ಕುಡಿಯುವ ನೀರಿಗೆ 1010 ಕೋಟಿ ಅನುದಾನ ನೀಡಿದ್ದೇನೆ ಎಂದು ಫ್ಲೆಕ್ಸ್ ಹಾಕುತ್ತಿದ್ದಾರೆ ಇದು ನಾಚಿಕೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಬಿಜೆಪಿ ಸರಕಾರದ ಯೋಜನೆಗಳನ್ನು ತನ್ನದೆಂದು ಬಿಂಬಿಸುತ್ತಿದ್ದಾರೆ, ಶಾಸಕ ತಮ್ಮ ಅನುದಾನದಿಂದ 1010 ಕೋಟಿ ಬಿಡುಗಡೆ ಮಾಡಿದ ಯೋಜನೆಯ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡಲಿ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಗಿರುವುದು ಸ್ವಾಗತಾರ್ಹ ವಿಚಾರ, ಆದರೆ ಅದಕ್ಕೆ ಬೇಕಾದ ಯಾವುದೇ ವ್ಯವಸ್ಥೆಯನ್ನು ಮಾಡಿಲ್ಲ, ಪುತ್ತೂರಿನಲ್ಲಿ ಮೊದಲಿಗೆ 300 ಹಾಸಿಗೆಯ ಆಸ್ಪತ್ರೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು, ಆದರೆ ಈ ಬಜೆಟ್ ನಲ್ಲಿ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಎಸ್ಪಿ ಕಛೇರಿ, ಕ್ರೀಡಾಂಗಣಕ್ಕೆ ಜಾಗ ನಿಗದಿ ಮಾಡಿರೋದು ನಾನು, ಶಾಸಕರು ಮಾಡಿದ್ದರೆ ಈ ಬಗ್ಗೆ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡಬೇಕು ಅದು ಬಿಟ್ಟು ಸುಖಾಸುಮ್ಮನೆ ಸಾರ್ವಜನಿಕರ ಸುಳ್ಳು ಹೇಳೋದನ್ನ ಶಾಸಕರು ಇನ್ನಾದರೂ ಬಿಡಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.