KARNATAKA
ಬಾಡಿಗೆ ಕೇಳಿದ್ದಕ್ಕೆ ನಿವೃತ್ತ ಉಪತಹಶೀಲ್ದಾರ್ ರನ್ನು ಕೊಂದು ಸುಟ್ಟು ಹಾಕಿದ ಬಾಡಿಗೆದಾರ
ಬೆಂಗಳೂರು: ಬಾಡಿಗೆ ಕೇಳಿದ್ದಕ್ಕೆ ನಿವೃತ್ತ ಮಹಿಳಾ ಉಪ ತಹಸೀಲ್ದಾರ್ ರನ್ನು ಕೊಂದು ಸುಟ್ಟು ಹಾಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಲೆಯಾದವರನ್ನು ಸರಸ್ವತಿ ಪುರಂನ ನಿವಾಸಿ ರಾಜೇಶ್ವರಿ ಎಂದು ಗುರುತಿಸಲಾಗಿದ್ದು ಇವರು ಉಪ ತಹಸೀಲ್ದಾರ್ ಆಗಿದ್ದು ಈಗ ನಿವೃತ್ತಿಯಾಗಿದ್ದಾರೆ. ರಾಜೇಶ್ವರಿ ಸರಸ್ವತಿ ಪುರಂನಲ್ಲಿ 3 ಅಂತಸ್ತಿನ ಮನೆ ಹೊಂದಿದ್ದು, ಇದರಲ್ಲಿ ವಾಸವಿದ್ದ ಬಾಡಿಗೆದಾರನೇ ಅವರ ಕೊಲೆಗಾರ ಎಂಬ ಸತ್ಯ ಬಯಲಾಗಿದೆ.
ರಾಜೇಶ್ವರಿ ಅವರಿಗೆ ಸೇರಿದ್ದ ಮೂರು ಅಂತಸ್ತಿನ ಮನೆಯಲ್ಲಿ 2 ಮತ್ತು 3ನೇ ಮಹಡಿಯಲ್ಲಿ ಅಲಿಂ ಪಾಷಾ, ಈತನ ಅಕ್ಕ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಎರಡು ವರ್ಷದಿಂದ ಬಾಡಿಗೆಗೆ ವಾಸವಿದ್ದರು. ಆಲಿಂ ಪಾಷ ಆಟೋ ಡ್ರೈವರ್ ಆಗಿದ್ದ. 3ನೇ ಮಹಡಿಯಲ್ಲಿ ಆಲಿಂ ಪಾಷ ಮತ್ತು ಅಕ್ಕ ಇದ್ದರು. 2ನೇ ಮಹಡಿಯ ಮನೆಯಲ್ಲಿ ಚಿಕ್ಕಪ್ಪ ಸಾದಿಕ್ ಪಾಷ ಮತ್ತು ಪತ್ನಿ ಇದ್ದರು.
7 ತಿಂಗಳಿಂದ ಬಾಡಿಗೆ ಕಟ್ಟದೆ ಆಲಿಂ ಪಾಷ ಸತಾಯಿಸುತ್ತಿದ್ದ ಎಂದು ಹೇಳಲಾಗಿದ್ದು, ಫೆಬ್ರವರಿ 3 ರಂದು ಬಾಡಿಗೆ ಹಣ ಸಂಗ್ರಹಿಸಲು ಮನೆ ಬಳಿಗೆ ನಿವೃತ್ತ ತಹಸೀಲ್ದಾರ್ ರಾಜೇಶ್ವರಿ ಹೋಗಿದ್ದರು. ಬಾಡಿಗೆದಾರ ಆಲಿಂ ಪಾಷ ಹಣ ಕೊಡದ್ದಾಗ ಪೊಲೀಸ್ ಕಂಪ್ಲೇಂಟ್ ಕೊಡುವುದಾಗಿ ಮನೆಯ ಮಾಲಕಿ ಎಚ್ಚರಿಸಿದ್ದರು. ಗಾಂಜಾ ಮತ್ತಿನಲ್ಲಿದ್ದ ಆಲಿಂ ಪಾಷ, ಕುಪಿತಗೊಂಡು ರಾಜೇಶ್ವರಿಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ನಂತರ ತನ್ನ ಚಿಕ್ಕಪ್ಪನ ಸಹಾಯದಿಂದ ಆಟೋದಲ್ಲಿ ಶವ ತೆಗೆದುಕೊಂಡು ಬಿಡದಿಗೆ ಹೋಗಿದ್ದಾರೆ. ಅಲ್ಲೇ ರಾಜೇಶ್ವರಿಯ ಶವ ಸುಟ್ಟುಹಾಕಿದ್ದಾರೆ.
ರಾಜೇಶ್ವರಿ ಕಾಣಿಸುತ್ತಿಲ್ಲ ಎಂದು ಕುಟುಂಬಸ್ಥರು ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಬಾಡಿಗೆದಾರರನ್ನು ಕರೆಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿ ಆಲಿಂ ಪಾಷನನ್ನು ಪೊಲೀಸರು ಬಂಧಿಸಿದ್ದಾರೆ