LATEST NEWS
ಈಗೇನಿದ್ದರೂ, ಅನಾಥ ಈ ಮೊಯ್ಲೂರಪ್ಪ !

ಈಗೇನಿದ್ದರೂ, ಅನಾಥ ಈ ಮೊಯ್ಲೂರಪ್ಪ !
ಉಡುಪಿ ಸೆಪ್ಟೆಂಬರ್ 6: ಹುಟ್ಟಿದೂರು ಬಿಟ್ಟು ಹೋಯ್ತು, ನೆಲೆ ಕಂಡ ಊರು ಕಳೆದ್ಹೋಯ್ತು ಅನ್ನೋದು ಮಾಜಿ ಸಿಎಂ ವೀರಪ್ಪ ಮೊಯಿಲಿ ಪಾಲಿಗೆ ಚೆನ್ನಾಗೇ ಸೂಟ್ ಆಗತ್ತೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಹುಟ್ಟಿ ಬೆಳೆದು ಶಾಸಕನಾಗಿ, ರಾಜ್ಯದ ಮುಖ್ಯಮಂತ್ರಿಯಾದ ವೀರಪ್ಪ ಮೊಯಿಲಿ ಈಗ ಪಕ್ಷದಲ್ಲಿಯೇ ಅನಾಥರಾಗಿದ್ದು, ಅತ್ತ ಕೇಂದ್ರದಲ್ಲೂ ಇಲ್ಲ. ಇತ್ತ ರಾಜ್ಯದಲ್ಲೂ ಹಿಡಿತ ಇಲ್ಲ. ಹುಟ್ಟಿದ ಊರು ಕಾರ್ಕಳದಲ್ಲೂ ಹಿಡಿತ ಇಲ್ಲದೆ, ಒಂದು ರೀತಿಯಲ್ಲಿ ಎಲ್ಲವನ್ನೂ ಕಳಕೊಂಡ ಭಾವ.
ಕಾರ್ಕಳದಲ್ಲಿ ತನ್ನ ಪಟ್ಟ ಶಿಷ್ಯನಾಗಿದ್ದ ಗೋಪಾಲ ಭಂಡಾರಿ ನಿಧನರಾಗಿದ್ದು ಉಡುಪಿ ಜಿಲ್ಲೆಯಲ್ಲೇ ಮೊಯ್ಲಿ ಅಸ್ತಿತ್ವಕ್ಕೆ ಪೆಟ್ಟು ಬಿದ್ದಂತಾಗಿದೆ. ಹೀಗಾಗಿ ಮರಳಿ ಗೂಡಿಗೆ ಅನ್ನುವ ಹಾಗೆ, ಕಾರ್ಕಳ, ಉಡುಪಿಯಲ್ಲಿ ಮತ್ತೆ ಹಿಡಿತ ಸಾಧಿಸಲು ಮೊಯ್ಲಿ ಬಲೆ ಹೆಣೆಯತೊಡಗಿದ್ದಾರೆ.
ಕಾರ್ಕಳದಲ್ಲಿ ಶಿಷ್ಯ ಗೋಪಾಲ ಭಂಡಾರಿಯನ್ನು ನೆಲೆಯೂರಿಸಿದ್ದ ಮೊಯ್ಲಿ, ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಬಳ್ಳಾಪುರಕ್ಕೆ ತೆರಳಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಅಲ್ಲಿನ ಜನರನ್ನು ಮರುಳು ಮಾಡುತ್ತಲೇ ನೀರು ತರುವ ನಾಟಕವಾಡಿ ಎರಡು ಅವಧಿಗೆ ಎಂಪಿ ಆಗಿ, ಈಗ ಜನರಿಂದಲೇ ಉಗಿಸಿಕೊಂಡಿದ್ದಾರೆ.

ಎತ್ತಿನಹೊಳೆ ಯೋಜನೆ ಮೂಲಕ ನೀರು ತರುತ್ತೇನೆಂದು ಹೇಳುತ್ತಲೇ, ತನ್ನ ಆಪ್ತ ಗುತ್ತಿಗೆದಾರ ಉಡುಪಿ ಮೂಲದ ಜಿ.ಶಂಕರ್ ಗೆ ಕಂಟ್ರಾಕ್ಟ್ ಕೊಡಿಸಿ, ಮೊಯ್ಲಿ ತನ್ನ ಜೇಬು ತುಂಬಿಸಿಕೊಂಡಿದ್ದು ಮಾತ್ರ ಅನ್ನೋದು ಚಿಕ್ಕಬಳ್ಳಾಪುರದ ಜನರಿಗೂ ಗೊತ್ತಾಗಿ ಈ ಬಾರಿ ಒದ್ದು ಕಳಿಸಿದ್ದಾರೆ. ಹೀನಾಯ ಸೋಲಿನಿಂದಾಗಿ ಭವಿಷ್ಯದಲ್ಲಿ ತನ್ನ ಬೇಳೆ ಬೇಯುವುದಿಲ್ಲ ಅನ್ನುವುದು ಮೊಯ್ಲಿಗೂ ತಿಳಿಯದ ವಿಷಯ ಅಲ್ಲ. ಇದೇ ಕಾರಣಕ್ಕೆ ಮತ್ತೆ ಊರಿಗೆ ಮರಳಿ, ತನ್ನ ಪುತ್ರನಿಗಾದರೂ ನೆಲೆ ಕಲ್ಪಿಸಿಕೊಳ್ಳುವ ತವಕದಲ್ಲಿದ್ದಾರೆ.
ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೆಪದಲ್ಲಿ ತನ್ನ ಪುತ್ರನನ್ನು ಕರ್ಕೊಂಡು ಕುಂದಾಪುರ, ಬೈಂದೂರಿಗೂ ತೆರಳಿದ್ದಾರೆ. ಅದರ ನೆಪದಲ್ಲಿ ಉಡುಪಿಯಲ್ಲಿ ಸುದ್ದಿಗೋಷ್ಠಿ ಕರೆದು, ಸದ್ಯ ಕಾಂಗ್ರೆಸ್ನಿಂದ ಹೊರಗಿರುವ ಪ್ರಮೋದ್ ಮಧ್ವರಾಜನ್ನು ಬದಿಗಿಟ್ಟು ಅಲ್ಲಿ ತನ್ನ ಪುತ್ರನನ್ನು ಪ್ರತಿಷ್ಠಾಪಿಸಲು ತಂತ್ರ ಹೆಣೆದಿದ್ದಾರೆ.
ಪ್ರಮೋದ್ ಮಧ್ವರಾಜನ್ನು ಮತ್ತೆ ಮರಳಿ ಪಕ್ಷಕ್ಕೆ ಕರೆತರುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಮೊಯ್ಲಿ ಕುಪಿತರಾಗಿಯೇ ಪ್ರಮೋದ್ ಜೆಡಿಎಸ್ ನಲ್ಲಿ ಇದ್ದಾರಲ್ಲಾ ಅಂತಾ ಮರಳಿ ಪ್ರಶ್ನೆ ತೂರಿದ್ದರು. ಮೊಯ್ಲಿಯ ಈ ಬಡಬಡಿಕೆ, ಉಡುಪಿ ಕಾಂಗ್ರೆಸ್ ಪದಾಧಿಕಾರಿಗಳಲ್ಲಿಯೇ ಸಿಟ್ಟು ಮೂಡುವಂತೆ ಮಾಡಿತ್ತು. ಯಾಕಂದ್ರೆ, ಉಡುಪಿ ಕಾಂಗ್ರೆಸಿನಲ್ಲಿ ಪ್ರಮೋದ್ ಹಿಂಬಾಲಕರೇ ಜಾಸ್ತಿ. ಸಹಜವಾಗೇ ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಅಮೀನ್, ಸುದ್ದಿಗೋಷ್ಠಿಯಲ್ಲಿ ಅಪ್ಪನ ಜೊತೆಗೆ ಕಾಣಿಸಿಕೊಂಡಿದ್ದ ಹರ್ಷ ಮೊಯ್ಲಿಗೆ ಕರೆ ಮಾಡಿದ್ದಾರೆ. ಪ್ರಮೋದ್ ಬಗ್ಗೆ ಹಾಗೆಲ್ಲ ಹೇಳುವುದು ಬೇಡ, ಅವರೇನಿದ್ದರೂ ಮತ್ತೆ ಬರುತ್ತಾರೆ ಅಂತ ಅಪ್ಪನಿಗೆ ಚೂರು ಹೇಳುವಂತೆ ಸಲಹೆ ನೀಡಲು ಮುಂದಾಗಿದ್ದರು. ಆದರೆ ಹರ್ಷ ಮೊಯ್ಲಿ ಅಷ್ಟಕ್ಕೇ ಗರಂ ಆಗಿದ್ದು, ಪ್ರಮೋದ್ ಅಲ್ಲೇ ಇರಲಿ, ನಿನಗೇಕೆ ಚಿಂತೆ ಅನ್ನುತ್ತಲೇ ಏಕವಚನದಲ್ಲಿಯೇ ಬೈದಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಮೊಯ್ಲಿ ತಂತ್ರಕ್ಕೇ ತಿರುಗುಬಾಣವಾಗಿತ್ತು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್, ಚುನಾವಣೆ ಸೋತು ಮೈತ್ರಿ ಸರಕಾರ ಬಿದ್ದು ಹೋದರೂ ಜೆಡಿಎಸ್ ಸದಸ್ಯತ್ವ ಬಿಟ್ಟುಕೊಟ್ಟಿರಲಿಲ್ಲ. ಈಗ ಮೊಯ್ಲಿ ತನ್ನ ಕ್ಷೇತ್ರದಲ್ಲಿ ಕೈಯಾಡಿಸುತ್ತಿರುವುದು ಗೊತ್ತಾದ ಕೂಡಲೇ ಪ್ರಮೋದ್ ಬಡಬಡಿಸುತ್ತಲೇ, ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗಂತ, ಕಾಂಗ್ರೆಸ್ ಸದಸ್ಯತ್ವ ಇನ್ನೂ ಪಕ್ಕಾ ಆಗಿಲ್ಲ. ಅತ್ತ ದರಿ, ಇತ್ತ ಪುಲಿ ಎಂಬಂತಾಗಿರೋ ಪ್ರಮೋದ್ ಮಧ್ವರಾಜ್, ಒಂದ್ಕಡೆ ಬಿಜೆಪಿಯತ್ತಲೂ ಮನಸ್ಸು ಹೊಂದಿದ್ದಾರೆ.
ಕಳೆದ ಬಾರಿಯೇ ಎಂಪಿ ಟಿಕೆಟ್ ಸಿಗುವುದಿದ್ದರೆ, ಬಿಜೆಪಿಗೆ ಬರಲು ರೆಡಿಯಿದ್ದರು. ಆದರೆ, ಟಿಕೆಟ್ ಸಿಗುವುದಿಲ್ಲ ಎಂದು ಗೊತ್ತಾಗಿ ಕೊನೆಗೆ ಕಾಂಗ್ರೆಸಿನಲ್ಲಿಯೇ ಉಳಿದಿದ್ದರು. ಕೊನೆಕ್ಷಣದಲ್ಲಿ ಉಡುಪಿ ಕ್ಷೇತ್ರವೇ ಮೈತ್ರಿ ನೆಪದಲ್ಲಿ ಜೆಡಿಎಸ್ ಪಾಲಾದಾಗ, ಆ ಪಕ್ಷದ ಸದಸ್ಯತ್ವ ಪಡೆದು ಮೈತ್ರಿ ಅಭ್ಯರ್ಥಿಯಾಗಿದ್ದರು. ಈಗ ಮತ್ತೆ ತನ್ನದೇ ಹಿಂಬಾಲಕರ ಮೂಲಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಬಾಗಿಲು ತಟ್ಟುವ ಕೆಲಸ ಮಾಡುತ್ತಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೊಡಿಸಲು ವೀರಪ್ಪ ಮೊಯ್ಲಿ ಲಾಬಿ ಮಾಡಿದ್ದರು. ಜನಾರ್ದನ ಪೂಜಾರಿಯಿಂದ ಟಿಕೆಟ್ ತಪ್ಪಿಸಿ, ಪುತ್ರ ಹರ್ಷ ಮೊಯಿಲಿಗೆ ಸಿಗುವಂತೆ ಕೇಂದ್ರ ಮಟ್ಟದಲ್ಲಿ ಕೆಲಸ ಮಾಡಿದ್ದರು. ಅದು ತಕ್ಕಮಟ್ಟಿಗೆ ಯಶಸ್ವಿಯೂ ಆಗಿತ್ತು. ಆದರೆ, ಕೊನೆಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಟಿಕೆಟಿಗಾಗಿ ಓಟಿಂಗ್ ನಡೆದು ಮೊಯ್ಲಿ ಬಣ ಪೂಜಾರಿ ಎದುರು ಸೋಲು ಕಂಡಿತ್ತು.
ಆ ಬಳಿಕ ದಕ್ಷಿಣ ಕನ್ನಡದಲ್ಲಿ ಎತ್ತಿನಹೊಳೆ ವಿಚಾರದಲ್ಲಿ ವಿಲನ್ ಆಗಿ ಕಾಣಿಸಿಕೊಂಡ ವೀರಪ್ಪ ಮೊಯ್ಲಿ ತನ್ನ ಛಾಪು ಕಳಕೊಂಡಿದ್ದರು. ಜಾಲತಾಣದಲ್ಲಂತೂ ಅತಿಹೆಚ್ಚು ಉಗಿಸಿಕೊಂಡ ಕರಾವಳಿಯ ಏಕೈಕ ರಾಜಕಾರಣಿ ಈ ಮೊಯ್ಲಿ. ಮಂಗಳೂರಿನಲ್ಲಿ ಕನಿಷ್ಠ ಪ್ರೆಸ್ ಮೀಟ್ ಮಾಡೋದಕ್ಕೂ ಹೆದರುತ್ತಿರುವ ಈ ಮೊಯಿಲಿಯವರು, ದಕ್ಷಿಣ ಕನ್ನಡದಲ್ಲಿ ಪುತ್ರನಿಗೆ ಟಿಕೆಟ್ ಕೊಡಿಸುವ ಆಸೆಯನ್ನೇ ಕೈಬಿಟ್ಟಿದ್ದಾರೆ. ಎರಡು ಅವಧಿಗೆ ಕೈ ಹಿಡಿದ ಚಿಕ್ಕಬಳ್ಳಾಪುರದಲ್ಲಿಯೂ ಈ ಬಾರಿ ಹೀನಾಯ ಸೋಲು ಕಂಡಿದ್ದು ಮೊಯ್ಲಿ ಪಾಲಿಗೆ ಇಂಗು ತಿಂದ ಮಂಗನಂತಾದ ಪರಿಸ್ಥಿತಿ. ಇನ್ನೊಂದ್ಕಡೆ ಕಾರ್ಕಳದಲ್ಲಿ ಉದಯ ಕುಮಾರ್ ಶೆಟ್ಟಿ ಪ್ರಬಲವಾಗುತ್ತಿರುವುದು ನುಂಗಲಾರದ ತುತ್ತು. ಕಳೆದ ಬಾರಿ ಟಿಕೆಟ್ ಖಾತ್ರಿ ಮಾಡಿಕೊಂಡಿದ್ದ ಶೆಟ್ಟಿಗೆ ಇದೇ ವೀರಪ್ಪ ಮೊಯ್ಲಿ ಕೊನೆಕ್ಷಣದಲ್ಲಿ ಅಡ್ಡಗಾಲು ಹಾಕಿ ಟಿಕೆಟ್ ತಪ್ಪಿಸಿದ್ದರು. ಇವೆಲ್ಲ ಕಾರಣದಿಂದಾಗಿ ಕೊನೆಯ ಪ್ರಯತ್ನವಾಗಿ ಮೊಯ್ಲಿ ಈಗ ಉಡುಪಿಯತ್ತ ಹೊರಳಿದ್ದಾರೆ.
ಆದರೆ, ಬಾಣ ಬಿಟ್ಟ ಮೊದಲ ಪ್ರಯತ್ನದಲ್ಲೇ ಪಕ್ಷದ ಕಾರ್ಯಕರ್ತರಿಂದ ಮಂಗಳಾರತಿ ಮಾಡಿಸಿಕೊಂಡಿದ್ದಾರೆ. ಎತ್ತಿನಹೊಳೆಯ ಹೆಸರಲ್ಲಿ ಪಶ್ಚಿಮ ಘಟ್ಟವನ್ನು ಬಗೆದು ನಿಸರ್ಗಕ್ಕೆ ಮಾಡಿರೋ ಹಾನಿ, ಚಿಕ್ಕಬಳ್ಳಾಪುರದ ಜನರ ಕಣ್ಣೀರಿನ ಶಾಪ ಮೊಯ್ಲಿಯನ್ನು ಯಾವತ್ತಿಗೂ ಕಾಡದಿರದು ಅನ್ನುವುದಕ್ಕೆ ಇದೇ ಸಾಕ್ಷಿ ಅನ್ನಬೇಕು. ಈಗ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೆಪದಲ್ಲಿ ಜನರ ಬಳಿ ತೆರಳುತ್ತಿರುವ ಈ ಮನುಷ್ಯ ಜನರಿಂದ ಮಂಗಳಾರತಿ ಮಾಡಿಸಿಕೊಳ್ಳುವುದು ಮಾತ್ರ ಬಾಕಿ.