LATEST NEWS
ತಾಯಿಯ ಮಡಿಲಲ್ಲಿ ಸುಖ ನಿದ್ದೆ – ವೈರಲ್ ಆದ ಪೋಟೋ ಹಿಂದೆ ಇದೆ ಅರಣ್ಯ ಅಧಿಕಾರಿಗಳ ನಿಸ್ವಾರ್ಥ ಸೇವೆ
ತಮಿಳುನಾಡು. ಜನವರಿ 05 : ಸಾಮಾಜಿಕ ಜಾಲತಾಣದಲ್ಲಿ ಇದೀಗ ಒಂದು ಪೋಟೋ ಸಖತ್ ವೈರಲ್ ಆಗಿದೆ. ಪುಟ್ಟ ಆನೆ ಮರಿಯೊಂದು ತಾಯಿಯ ಮಡಿಲಲ್ಲಿ ಸುಖ ನಿದ್ದೆ ಮಾಡುತ್ತಿರುವ ಪೋಟೋ ಇದಾಗಿದೆ. ಮಗು ತನ್ನ ತಾಯಿಯ ತೋಳಲ್ಲಿ ಹೇಗೆ ಮಲಗುತ್ತದೋ ಅದೇ ರೀತಿ ಆನೆ ಮರಿ ತನ್ನ ತಾಯಿ ತೋಳಲ್ಲಿ ಮಲಗಿದೆ, ಇದ್ರಲ್ಲಿ ಅಂತಹ ವಿಶೇಷವೇನಿದೆ ಎಂದು ನೀವು ಭಾವಿಸಬಹುದು. ಆದ್ರೆ ಇದರ ಹಿಂದಿನ ಕಥೆ ನಿಮ್ಮನ್ನು ಖಂಡಿತವಾಗಿಯೂ ಭಾವುಕರನ್ನಾಗಿಸುತ್ತದೆ. ಹೌದು ಇದು ತಾಯಿ ಆನೆ ಮತ್ತು ಮರಿ ಆನೆಯ ಪುನರ್ಮಿನಲದ ಹೃದಯಸ್ಪರ್ಶಿ ಕಥೆಯಾಗಿದೆ.
ಈ ಘಟನೆ ಪೊಲ್ಲಾಚಿಯ ಆನ್ನಾಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದ್ದು, ಈ ಪ್ರದೇಶದಲ್ಲಿ ಕೆಲವು ದಿನಗಳ ಹಿಂದೆ 4 ರಿಂದ 5 ತಿಂಗಳಿನ ಆನೆ ಮರಿಯೊಂದು, ತನ್ನ ಹಿಂಡಿನಿಂದ ಬೇರ್ಪಟ್ಟಿತ್ತು. ತನ್ನ ತಾಯಿಯ ಮಡಿಲು ಸೇರಲು ಈ ಪುಟಾಣಿ ಆನೆ ಮರಿ ನಿದ್ದೆ ಊಟವನ್ನೆಲ್ಲಾ ಬಿಟ್ಟು ತನ್ನ ತಾಯಿ ಹುಡುಕಾಟದಲ್ಲಿತ್ತು. ಆನೆ ಮರಿ ತಾಯಿಯನ್ನು ಹುಡುಕಾಡುತ್ತಾ ಏಕಾಂಗಿಯಾಗಿ ಅಲೆದಾಡುತ್ತಿರುವುದನ್ನು ಗಮನಿಸಿದ ಅರಣ್ಯಾಧಿಕಾರಿಗಳು, ಆನೆ ಮರಿಯನ್ನು ಹಿಡಿದು ಅದನ್ನು ಹೇಗಾದರೂ ತಾಯಿ ಆನೆಯೊಂದಿಗೆ ಸೇರಿಸಬೇಕೆಂದು ನಿರ್ಧರಿಸುತ್ತಾರೆ.
ಇದಕ್ಕಾಗಿ ಅರಣ್ಯಾಧಿಕಾರಿಗಳು ಡ್ರೋಣ್ ಬಳಸಿ ಆನೆಗಳ ಹಿಂಡಿನ ಶೋಧ ಕಾರ್ಯ ನಡೆಸುತ್ತಾರೆ. ಹಾಗೂ ಸುಮಾರು 3 ಕಿ.ಮೀ ದೂರದಲ್ಲಿ ಆನೆಗಳ ಹಿಂಡು ಇರುವುದನ್ನು ಪತ್ತೆ ಹಚ್ಚಿ, ತಾಯಿಯಿಂದ ಬೇರ್ಪಟ್ಟಿದ್ದ ಈ ಮರಿ ಆನೆಯನ್ನು ಅದರ ಕುಟುಂಬದ ಜೊತೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಣ್ಯಾಧಿಕಾರಿಗಳು ತಾಯಿ ಮಗುವಿನ ಪುನರ್ಮಿಲನದ ಫೋಟೋವೊಂದನ್ನು ಸೆರೆ ಹಿಡಿದಿದ್ದು, ಈ ಭಾವನಾತ್ಮಕ ಫೋಟೋ ಇದೀಗ ವೈರಲ್ ಆಗಿದೆ.
ಈ ಭಾವನಾತ್ಮಕ ಫೋಟೋವನ್ನು ಐ.ಎ.ಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ತಾಯಿ ಮಗು ಮತ್ತೆ ಜೊತೆ ಸೇರಿದಾಗ, ತನ್ನ ತಾಯಿಯ ಸಾಂತ್ವಾನದ ತೋಳುಗಳಲ್ಲಿ ಆನೆ ಮರಿ ನೆಮ್ಮದಿಯಾಗಿ ಮಲಗಿರುವ ಭಾವನಾತ್ಮಕ ಚಿತ್ರ ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಫೋಟೋದಲ್ಲಿ ತಾಯಿ ಆನೆ ಮತ್ತು ಮರಿ ಆನೆಯ ಪುನರ್ಮಿಲನದ ಫೋಟೋವನ್ನು ಕಾಣಬಹುದು.