DAKSHINA KANNADA
ಪುಂಡಯಿತಾ ಬನ ಕಾಡಿನಲ್ಲಿ ಕಂಡು ಬಂದ ಕಾಡಾನೆ….!!
ಕಡಬ ಫೆಬ್ರವರಿ 03: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ, ಕಡಬ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಗ್ರಾಮಸ್ಥರು ಭಯದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಪುತ್ತಿಗೆ ಶಾಲೆಗುಡ್ಡೆ ತಿರುವು ಬಳಿ ಪುಂಡಯಿತಾ ಬನ ಕಾಡಿನಲ್ಲಿ ಮೂರು ಕಾಡಾನೆಗಳು ಬೀಡು ಬಿಟ್ಟಿರುವುದಾಗಿ ತಿಳಿದು ಬಂದಿದೆ.
ಈ ಪ್ರದೇಶವು ಜನವಸತಿ ಪ್ರದೇಶವಾಗಿದ್ದು, ಕೃಷಿ ಭೂಮಿಗೆ ಆನೆಗಳು ಪ್ರವೇಶಿಸುವ ಸಲುವಾಗಿ ಕಾಡಿನಿಂದ ಹೊರಗಡೆ ಬಂದಿವೆ ಎನ್ನಲಾಗಿದೆ. ಆದರೆ ಇದಕ್ಕೆ ವಾಪಸ್ ಕಾಡು ಪ್ರವೇಶಿಸಲು ಈ ಪ್ರದೇಶಗಳಲ್ಲಿ ಅಳವಡಿಸಲಾದ ಸೋಲಾರ್ ಬೇಲಿ ಅಡ್ಡಿಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರಣದಿಂದಾಗಿ ಇದೀಗ ರಸ್ತೆಯಲ್ಲಿ ಮತ್ತು ಜನವಸತಿ ಪ್ರದೇಶದಲ್ಲಿ ಕಾಡಾನೆಗಳು ಸಂಚಾರ ಮಾಡುತ್ತಿದೆ. .ಈ ಹಿಂದೆ ಮೀನಾಡಿ ಎಂಬಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಗಳ ಹಿಂಡು ಇದು ಎನ್ನುವ ಮಾಹಿತಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಇಲ್ಲೇ ಸಮೀಪದಲ್ಲಿ ಸರಕಾರಿ ಶಾಲೆಯೊಂದಿದ್ದು ಪುಟ್ಟ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದು,ಅಪಾಯದ ಸನ್ನಿವೇಶ ಎದುರಾಗಿದೆ. ಕೂಡಲೇ ಅರಣ್ಯ ಇಲಾಖೆ ಈ ಬಗ್ಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಬೇಕಾಗಿದೆ ಸ್ತಳೀಯರು ಆಗ್ರಹಿಸಿದ್ದಾರೆ.