LATEST NEWS
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆಯ ವರ್ಷದ ಪುಣ್ಯ ಸ್ಮರಣೆ
ಕುಂದಾಪುರ ಅಗಸ್ಟ್ 13: ಇತಿಹಾಸ ಪ್ರಸಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆನೆ ಇಂದಿರಾ ಒಂದು ವರ್ಷದ ಪುಣ್ಯ ಸ್ಮರಣೆಯನ್ನು ವಿಹಿಂಪ, ಭಜರಂಗದಳ ಮತ್ತು ಭಾಜಪ ವತಿಯಿಂದ ಜಂಟಿಯಾಗಿ ನಡೆಸಲಾಯಿತು. ಗುರುವಾರ ಮೂಕಾಂಬಿಕಾ ದೇವಾಲಯದ ಮುಂಭಾಗ ಇಂದಿರಾ ಆನೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳೆದ ವರ್ಷ ಇದೇ ದಿನ ಇಂದಿರಾ ನಮ್ಮನ್ನು ಬಿಟ್ಟು ಹೊರಟು ಹೋದಳು. ಅವಳಿಲ್ಲದ ಕೊಲ್ಲೂರು ದೇವಾಲಯ ಸಾಂಸ್ಕೃತಿಕ ಸೊಬಗನ್ನು ಕಳೆದುಕೊಂಡಿದೆ. ಬರೋಬ್ಬರಿ 22 ವರ್ಷ ಮೂಕಾಂಬಿಕೆಯ ಸೇವೆ ಮಾಡಿದ ಆನೆ ಕೊನೆಗಾಲದಲ್ಲಿ ನೆಮ್ಮದಿಯಿಂದ ಪ್ರಾಣ ಬಿಡಲಿಲ್ಲ, ಆನೆಯ ಮರಣ ನಂತರ ದೇವಾಲಯದಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮಗಳು ನಿಂತಿದೆ. ಕೊರೋನಾ ನೆಪ ಮಾತ್ರ, ಆದರೆ ಕೊಲ್ಲೂರಿನಲ್ಲಿ ಈ ಸಮಸ್ಯೆಗಳೆಲ್ಲಾ ಕೊನೆಗಾಲದಲ್ಲಿ ಆನೆಯನ್ನು ನಡೆಸಿಕೊಂಡ ರೀತಿಯಿಂದಾಗಿ ಈಗ ಈ ಸಮಸ್ಯೆಗೆ ಎದುರಾಗಿದೆ. ಆನೆಯ ಸಾವಿನ ಸುತ್ತ ಅನೇಕ ನಿಗೂಢತೆಗಳು ಅಡಗಿದೆ. ಸರಿಯಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಬಾಳೆಹೊನ್ನೂರಿನ ಭಕ್ತರಾದ ಮಧು ಎಂಬವರು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಇಂದಿರಾ ಆನೆಯನ್ನು ದಾನ ಕೊಟ್ಟಿದ್ದರು. 67 ವರ್ಷ ಪ್ರಾಯವಾಗಿದ್ದು ಆನೆ ಕಳೆದ ವರ್ಷ ಅಗ ಸ್ಚ್ 13ರ ರಾತ್ರಿ ಮೃತಪಟ್ಟಿತ್ತು. ಆನೆ ಸಾವಿನ ನಂತರ ಕೆಲವರ ಮೇಲೆ ಸ್ಥಳೀಯರು ಆರೋಪ ಮಾಡಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆ ಎಂದು ಕೋಟ ಶ್ರೀನಿವಾಸ್ ಪೂಜಾರಿಯವರು ಅಂದು ಹೇಳಿಕೆ ನೀಡಿದ್ದರು. ಆದರೆ ವರುಷ ಕಳೆದರೂ ತನಿಖೆಯ ಬಗ್ಗೆ ಯಾರೊಬ್ಬರಿಗೂ ಮಾಹಿತಿ ಇಲ್ಲ.