LATEST NEWS
ಒಂದು ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಸಂಚಾರ: ಎಂ.ಚಂದ್ರಪ್ಪ
ಮಂಗಳೂರು, ಅಕ್ಟೋಬರ್ 12: – ಒಂದು ತಿಂಗಳೊಳಗೆ ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್‍ಗಳು ಸಂಚರಿಸಲಿವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ. ಚಂದ್ರಪ್ಪ ಅವರು ಹೇಳಿದರು. ಮಂಗಳೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿರುವ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮುಂದಿನ ತಿಂಗಳೊಳಗೆ ಮೊದಲ ಹಂತದಲ್ಲಿ 50 ಎಲೆಕ್ಟ್ರಿಕಲ್ ಬಸ್‍ಗಳ ಸಂಚಾರ ಆರಂಭಿಸಲಾಗುವುದು, ಸದ್ಯ ತೈಲೋತ್ಪನ್ನ, ಟಯರ್ ಹಾಗೂ ಬಸ್ ಬಿಡಿ ಭಾಗಗಳ ಮೊತ್ತ ಹೆಚ್ಚಿದ್ದರೂ ಕೂಡ ಪ್ರಯಾಣಿಕರ ಹಿತ ದೃಷ್ಟಿಯಿಂದ ಪ್ರಯಾಣಿಕರ ಟಿಕೆಟ್ ದರ ಹೆಚ್ಚಿಸಿಲ್ಲ, ಅರವತ್ತು ವರ್ಷಗಳ ಇತಿಹಾಸದಲ್ಲೇ ಇದೀಗ ತಿಂಗಳ ಮೊದಲ ದಿನವೇ ರಾಜ್ಯದ ಎಲ್ಲ ಕೆ.ಎಸ್.ಆರ್.ಟಿ.ಸಿ ಉದ್ಯೋಗಿಗಳಿಗೆ ವೇತನ ನೀಡಲಾಗುತ್ತಿದೆ ಮತ್ತು 6 ವೇತನ ಆಯೋಗದ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೋವಿಡ್ ಹಾಗೂ ಇತರೆ ಕಾರಣಗಳಿಂದ ಈ ಹಿಂದೆ ಸರ್ಕಾರಿ ಬಸ್‍ಗಳಿಂದ ದಿನವೊಂದಕ್ಕೆ 6 ರಿಂದ 7ಕೋಟಿಗಳಷ್ಟು ಆದಾಯ ಬರುತ್ತಿತ್ತು, ಆದರೆ ಸದ್ಯ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡ ಕಾರಣ ದಿನವೊಂದಕ್ಕೆ ಕನಿಷ್ಟ 12ಕೋಟಿಯಷ್ಟು ವರಮಾನ ಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.