Connect with us

DAKSHINA KANNADA

ಈಝಿ ಆಯುರ್ವೇದದ 15ನೇ ವಾರ್ಷಿಕೋತ್ಸವ ಮತ್ತು ಸೌಂದರ್ಯ ಚಿಕಿತ್ಸಾ ವಿಭಾಗ “ಲಾಲಿತ್ಯ” ದ ಉದ್ಘಾಟನೆ.

ಮಂಗಳೂರು: ಆಯುರ್ವೇದ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಮೈಲಿಗಲ್ಲನ್ನು ಸ್ಥಾಪಿಸಿರುವ ಈಝೀ ಆಯುರ್ವೇದದ 15 ನೇ ವಾರ್ಷಿಕೋತ್ಸವವನ್ನು ವಿಶೇಷ ಸಂಭ್ರಮದೊಂದಿಗೆ ಆಚರಿಸಲಾಯಿತು. ಆಗಸ್ಟ್ 2009 ರಲ್ಲಿ ಡಾ. ಜನಾರ್ಧನ ವಿ ಹೆಬ್ಬಾರ್ ಅವರಿಂದ ಸ್ಥಾಪಿಸಲ್ಪಟ್ಟ ಈಝೀ ಆಯುರ್ವೇದವು ಆಯುರ್ವೇದ ಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆಯಾಗಿದ್ದು, ಸಾವಿರಾರು ಲೇಖನಗಳು, ವೀಡಿಯೊಗಳು, ಪುಸ್ತಕಗಳು ಮತ್ತು ನೇರ ಪ್ರಸಾರ ತರಗತಿಗಳೊಂದಿಗೆ ಸಮಗ್ರ ಸಂಪನ್ಮೂಲವಾಗಿ ಬೆಳೆದಿದೆ, ಹಾಗೂ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದೆ.

ಸಂಸ್ಥೆಯು ೧೫ ವರ್ಷಗಳನ್ನು ಪೂರೈಸಿದ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಎಂ.ಎಲ್ಸಿ ಶ್ರೀ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ಶ್ರೀ ಪರೀಕ್ಷಿತ್ ನೆಲ್ಯಾಡಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ಜೊತೆಗೆ ಈಝೀ ಆಯುರ್ವೇದ ಆಸ್ಪತ್ರೆಯ ವಿದೇಶಿ ಇಂಟರ್ನ್‌ಶಿಪ್ ತಂಡದ ಕಾರ್ಯಕ್ರಮ ಸಂಯೋಜಕಿ ಡಾ.ತೆರೇಸಾ ಅವರು ಗೌರವ ಅತಿಥಿಯಾಗಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಆಸ್ಪತ್ರೆಯ ಸೌಂದರ್ಯ ಚಿಕಿತ್ಸಾ ವಿಭಾಗ “ಲಾಲಿತ್ಯ” ದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಸಿ.ಎಂ.ಓ. ಡಾ.ರವಿಗಣೇಶ್ ಮೊಗ್ರ ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಈಝೀ ಆಯುರ್ವೇದ ತಂಡವು ರಚಿಸಿದ “ಮಾಧವ ನಿದಾನ IAST” ಪುಸ್ತಕವನ್ನು ಬಿಡುಗಡೆ ಮಾಡಿ, ಸಮಗ್ರ ಯೋಗಕ್ಷೇಮವನ್ನು ಸಾಧಿಸುವಲ್ಲಿ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಆರೋಗ್ಯದ ಮಹತ್ವದ ಕುರಿತು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.

ಈಝೀ ಆಯುರ್ವೇದ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಯಿತು ಮತ್ತು ಅತಿಥಿಗಳಿಗೆ ಈಝೀ ಆಯುರ್ವೇದ ತಂಡವು ರಚಿಸಿದ ಪುಸ್ತಕಗಳನ್ನು ನೀಡಲಾಯಿತು. ಡಾ. ತೆರೇಸಾ ಇಂಟರ್ನ್‌ಶಿಪ್ ಅವಧಿಯಲ್ಲಿನ ತಮ್ಮ ಸಕಾರಾತ್ಮಕ ಅನುಭವಗಳನ್ನು ಹಂಚಿಕೊಂಡರು, ಈಝೀ ಆಯುರ್ವೇದ ಒದಗಿಸಿದ ಆತಿಥ್ಯ ಮತ್ತು ಸಾಂಸ್ಕೃತಿಕ ಅನುಭವಗಳನ್ನು ಎತ್ತಿ ತೋರಿಸಿದರು. ಸಮಾರಂಭವು ಶ್ರೀ ಪರೀಕ್ಷಿತ್ ನೆಲ್ಯಾಡಿಯವರ ನೇರ ಕಲಾ ಪ್ರದರ್ಶನವನ್ನು ಸಹ ಒಳಗೊಂಡಿತ್ತು, ಅವರು ತಮ್ಮ ಪೇಪರ್ ಕಟಿಂಗ್ ಕಲೆಯ ಮೂಲಕ ಭಗವಾನ್ ಧನ್ವಂತರಿಯ ಚಿತ್ರವನ್ನು ಸೃಷ್ಟಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ತಮ್ಮ ಸಮಾರೋಪ ಭಾಷಣದಲ್ಲಿ ಡಾ. ಜನಾರ್ಧನ ವಿ ಹೆಬ್ಬಾರ್ ಅವರು ಈಝೀ ಆಯುರ್ವೇದದ 15 ವರ್ಷಗಳ ಪಯಣದ ಅನುಭವವನ್ನು ಹಂಚಿಕೊಂಡರು, ಜೊತೆಗೆ ಈ ಯಶಸ್ಸಿನ ಭಾಗವಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ಕೃಷ್ಟವಾದ ವಿಷಯ ಮತ್ತು ಹೊಸ ಉದ್ಯಮಗಳನ್ನು ನೀಡುವ ಮೂಲಕ ಸಂಸ್ಥೆಯು ಬೆಳೆಯುತ್ತಲೇ ಇರುತ್ತದೆ ಎಂಬ ಭರವಸೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *