KARNATAKA
ಉತ್ತರ ಕನ್ನಡದಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರ ಅಪಘಾತ: 9 ಜನರ ಸಾವು
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ 9 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ.
ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಗುಳ್ಳಾಪುರ ಘಟ್ಟ ಭಾಗದಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಸುಮಾರು 17 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಹಾವೇರಿ ಜಿಲ್ಲೆಯ ಸವಣೂರಿನವರು ಎನ್ನಲಾಗಿದೆ.
ತರಕಾರಿ ತುಂಬಿದ್ದ ಹಾವೇರಿಯಿಂದ ಅಂಕೋಲದ ಕಡೆ ಹೊರಟಿತ್ತು, ಲಾರಿಯಲ್ಲಿ 30 ಮಂದಿ ಕುಳಿತಿದ್ದರು. ವೇಗವಾಗಿ ಬರುತ್ತಿದ್ದ ವೇಳೆ ಲಾರಿ ಪಲ್ಟಿಯಾಗಿ ದುರಂತ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಯಲ್ಲಾಪುರ ಪೊಲೀಸರು 9 ಜನರ ಶವಗಳನ್ನ ಹೊರತೆಗೆದಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.