DAKSHINA KANNADA
ಡಿ ವಿ ಸದಾನಂದ ಗೌಡರ ಪತ್ರಿಕಾಗೋಷ್ಟಿ ಡಿಢೀರ್ ರದ್ದು, ಕುತೂಹಲಕ್ಕೆ ಕಾರಣವಾದ ಗೌಡರ ನಡೆ..!
ಬೆಂಗಳೂರು/ಪುತ್ತೂರು : ಟಿಕೆಟ್ ಕೈತಪ್ಪಿ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮಂಗಳವಾರ ಕರೆದ ಪತ್ರಿಕಾಗೋಷ್ಠಿ ಡಿಢೀರ್ ರದ್ದು ಮಾಡಿದ್ದಾರೆ. ಏಕಾಏಕಿ ಪತ್ರಿಕಾಗೋಷ್ಠಿ ರದ್ದು ಮಾಡಿ ಬುಧವಾರಕ್ಕೆ ಮುಂದೂಡಿರುವ ಗೌಡರ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಡಿವಿಎಸ್ ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಇಟ್ಟುಕೊಂಡಿದ್ದರು. ಎಲ್ಲ ಮಾಧ್ಯಮಗಳಿಗೂ ಇದರಲ್ಲಿ ಭಾಗವಹಿಸುವಂತೆ ಸಂದೇಶವನ್ನೂ ನೀಡಿದ್ದರು. ಇದರಲ್ಲಿ ಅವರು ತಮ್ಮ ಮುಂದಿನ ನಿಲುವನ್ನು ವ್ಯಕ್ತಪಡಿಸುವವರಿದ್ದರು. ಆದರೆ, ಇದೀಗ ಪತ್ರಿಕಾಗೋಷ್ಠಿಯನ್ನು ದಿಢೀರಾಗಿ ಮುಂದೂಡಿದ್ದಾರೆ. ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಡಿವಿ ಸದಾನಂದ ಗೌಡ ಸದ್ಯ ಒಂದು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ವರಿಷ್ಠರ ಜೊತೆಗೆ ಚರ್ಚೆ ನಡೆಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದಿಲ್ಲಿಗೆ ತೆರಳಿದ್ದಾರೆ.
ಕುಟುಂಬದ ಸದಸ್ಯರೊಡನೆ ಡಿವಿ ಚರ್ಚೆ :
ಸುಳ್ಯದ ಮಂಡೆಗೋಲಿನ ದೇವರಗುಂಡ ಮನೆತನದ ಡಿವಿ ಸದಾನಂದ ಗೌಡ ಬಿಜೆಪಿ ವಿರುದ್ಧ ಸ್ಪರ್ಧೆ ಮಾಡುವ ಬಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಚರ್ಚೆಯ ವೇಳೆ ಕಾಂಗ್ರೆಸ್ ಸೇರುವುದಕ್ಕಿಂತ ಪಕ್ಷೇತರ ಸ್ಪರ್ಧೆ ಒಳಿತು ಎಂದು ಸೂಚನೆ ನೀಡಿರುವ ಕುಟುಂಬದ ಹಿರಿಯರು ಡಿವಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಸ್ಪರ್ಧಿಸುವುದಾದರೆ ಪಕ್ಷೇತರ ಸ್ಪರ್ಧಿಸಿ ಎಂದೂ ಕುಟುಂಬ ಮುಖಂಡರು ಸಲಹೆ ನೀಡಿದ್ದಾರೆ ಎಂದು ತೀಲಿದು ಬಂದಿದೆ. ಕೇಂದ್ರ ನಾಯಕರ ಸೂಚನೆ ಮೇರೆಗೆ ಈ ಬಾರಿ ಚುನಾವಣೆ ನಿಲ್ಲದಿರಲು ಡಿವಿ ಮೊದಲಿಗೆ ನಿರ್ಧರಿಸಿದ್ದು ಈ ಬಗ್ಗೆ ಅಧಿಕೃತವಾಗಿ ಹೇಳಿಕೆ ಕೂಡ ನೀಡಿದ್ದರು. ಈ ನಡುವೆ ಡಿವಿ ಸ್ಪರ್ಧಿಸಿದ್ದ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಕೇಳಿಬಂದ ಶೋಭಾ ಕರಂದ್ಲಾಜೆ, ಸಿಟಿ ರವಿ ಹೆಸರು ಮುನ್ನಲೆಗೆ ಬಂದಾಗ ಸ್ಥಳೀಯ ಬಿಜೆಪಿ ಮುಖಂಡರಿಂದಲೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವಂತೆ ಸದಾನಂದ ಗೌಡರ ಮೇಲೆ ಒತ್ತಡ ಹೇರಿದ್ದರು. ಕ್ಷೇತ್ರದ ಸ್ಥಳೀಯ ವ್ಯಕ್ತಿಯನ್ನು ಅಭ್ಯರ್ಥಿ ಮಾಡಬೇಕು ಮತ್ತು ಹೊರಗಿನ ವ್ಯಕ್ತಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ಸ್ಥಳೀಯ ಬಿಜೆಪಿ ಮುಖಂಡರಿಂದ ಡಿವಿಗೆ ಮನವಿ ಸಲ್ಲಿಕೆಯಾಗಿತ್ತು. ಬಿಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಮತ್ತೆ ಚುನಾವಣೆ ಸ್ಪರ್ಧಿಸುವ ಇಂಗಿತವನ್ನು ಡಿವಿ ವ್ಯಕ್ತಪಡಿಸಿದ್ದರು. ಕುಟುಂಬ ಸದಸ್ಯರೊಂದಿಗೆ ಈ ವಿಚಾರವನ್ನು ಡಿವಿ ಸದಾನಂದ ಗೌಡ ಹಂಚಿಕೊಂಡಿಕೊಂಡಿದ್ದಾರೆ.
ರಾಜ್ಯ ಒಕ್ಕಲಿಗ ಸಂಘದ ಪ್ರಮುಖರ ಜೊತೆ ಸಭೆ :
ರಾಜ್ಯ ಒಕ್ಕಲಿಗ ಸಂಘದ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಕಿಮ್ಸ್ ನಲ್ಲಿ ನಡೆದ ಸಭೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಿದ್ದಾರೆ.ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮುಂದಿನ ನಿಲುವಿನ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.