KARNATAKA
ನನ್ನ ಮಕ್ಕಳಿಗೆ, ನನ್ನ ಕುಟುಂಬದವರಿಗೆ, ನನ್ನ ಸಂಬಂಧಿಕರಿಗೆ, ನನ್ನ ಚೇಲಾಗಳಿಗೆ ಇರುವಂತಹ ಪಕ್ಷ ಬಿಜೆಪಿಯಾಗಬಾರದು – ಡಿ ವಿ ಸದಾನಂದ ಗೌಡ

ಬೆಂಗಳೂರು ಮಾರ್ಚ್ 21: ಕೊನೆಗೂ ಡಿವಿ ಸದಾನಂದ ಗೌಡ ಅವರು ತಾನು ಪಕ್ಷ ಬಿಡುವುದಿಲ್ಲ, ಪಕ್ಷದಲ್ಲೇ ಇದ್ದು ಶುದ್ದೀಕರಣದ ಕಡೆಗೆ ನಾನು ಗಮನ ನೀಡುತ್ತೇನೆ ಎಂದು ಹೇಳುವ ಮೂಲಕ ಕಾಂಗ್ರೇಸ್ ಸೇರ್ಪಡೆಯ ಕುತೂಹಲಕ್ಕೆ ತೆರೆ ಏಳೆದಿದ್ದಾರೆ,
ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿವಿಎಸ್ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಒಂದು ಸುದ್ದಿ ಹರಡಿತ್ತು. ಈ ಸುದ್ದಿಯ ಬೆನ್ನಲ್ಲೇ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಬಿಜೆಪಿಯನ್ನು ಬಿಡುವುದಿಲ್ಲ. ಕಾಂಗ್ರೆಸ್‌ನಿಂದ ಆಹ್ವಾನ ಬಂದಿದ್ದು ನಿಜ. ಆದರೆ ನಾನು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಟಿಕೆಟ್ ಕೈತಪ್ಪಿದ್ದರಿಂದ ಬೇಸರವಾಗಿದ್ಯಾ ಎಂಬ ಪ್ರಶ್ನೆಗೆ, ಬೇಸರವಾಗಿದೆ ಎಂದು ಹೇಳಿದ ಡಿವಿಎಸ್ ನನ್ನನ್ನು ಅವಮಾನಿಸಿದವರು ಮುಂದೆ ಪಶ್ಚಾತ್ತಾಪಡ್ತಾರೆ. ಸಹಿಸಿಕೊಳ್ಳುವವರಿಗೆ ತಾಳ್ಮೆ ಇದ್ದರೆ, ದುಃಖ ಕೊಟ್ಟವರು ಇದ್ದೂ ಸತ್ತಂತೆ ಎಂದು ಅವಾಮಾನಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಅವರು ಹೇಳಿದಂತಹ ಪರಿವಾರವಾದ, ಮೋದಿ ಅವರು ಹೇಳಿದಂತಹ ಭ್ರಷ್ಟಾಚಾರವಾದ, ಮೋದಿ ಅವರು ಹೇಳಿದಂತಹ ಜಾತಿವಾದ ಕರ್ನಾಟಕದಲ್ಲಿ ಇರಬಾರದು. ಈ ಶುದ್ದೀಕರಣಕ್ಕೆ ವೇಗ ಕೊಡುವಂತದ್ದು ನನ್ನಿಂದ ಮಾತ್ರ ಸಾಧ್ಯ. ಜವಾಬ್ದಾರಿ ವಹಿಸಿಕೊಂಡವರು ಸ್ವಾರ್ಥಿಗಳಾಗಿದ್ದಾರೆ. ನನ್ನ ಮಕ್ಕಳಿಗೆ, ನನ್ನ ಕುಟುಂಬದವರಿಗೆ, ನನ್ನ ಸಂಬಂಧಿಕರಿಗೆ, ನನ್ನ ಚೇಲಾಗಳಿಗೆ ಇರುವಂತಹ ಪಕ್ಷ ಬಿಜೆಪಿಯಾಗಬಾರದು ಎಂದು ಹೇಳಿದರು. ಬಿಜೆಪಿಯೊಳಗೆ ಶುದ್ದೀಕರಣ ಆಗುವ ತನಕ ವಿರಮಿಸುವುದಿಲ್ಲ ಎಂದರು.