KARNATAKA
ಕೇವಲ 4500 ರೂಪಾಯಿಗೆ ಈಗ ಎಲ್ಲೆಡೆ ನನ್ನದೇ ಸುದ್ದಿ
ಬೆಂಗಳೂರು ಜನವರಿ 25: ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಲ್ಲಿ ನಿಂತು ₹ 10 ಮುಖಬೆಲೆಯ ನೋಟುಗಳನ್ನು ಎಸೆದಿದ್ದ ಆರೋಪಿ ಅರುಣ್ ಅವರನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದ ಬಳಿಕ ಅರುಣ್ ನಾನು ಕಡಿಮೆ ದುಡ್ಡಿನಲ್ಲಿ ಪ್ರಚಾರ ಹೇಗೆ ಪಡೆಯಬಹುದೆಂದು ತೋರಿಸಿದ್ದಾನೆ ಎಂದಿದ್ದಾನೆ.
ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ‘ಆರೋಪಿ ಅರುಣ್, ನಿರೂಪಕ ಹಾಗೂ ಕಾರ್ಯಕ್ರಮ ಸಂಘಟಕ. ವಿ ಡಾಟ್ 9 ಇವೆಂಟ್ಸ್ ಇಂಡಿಯಾ ಕಂಪನಿ ಸ್ಥಾಪಿಸಿ, ಅದರ ಕಾರ್ಯನಿರ್ವಾ ಹಕ ಅಧಿಕಾರಿ (ಸಿಇಒ) ಸಹ ಆಗಿದ್ದಾನೆ. ಯೂಟ್ಯೂಬ್ ಚಾನೆಲ್ ಸಹ ನಡೆಸುತ್ತಿದ್ದ. ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಭಾಷಣ ಮಾಡಿ, ಅದರ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಚಾರಕ್ಕಾಗಿ ನೋಟು ಎಸೆದೆ’ ‘ಹಣದ ನಿರ್ವಹಣೆ ಹಾಗೂ ಉದ್ಯಮದ ಬಗ್ಗೆ ಕಾರ್ಯಕ್ರಮ ಮಾಡುತ್ತೇನೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ವಿಡಿಯೊ ಹಾಕುತ್ತೇನೆ. ಆದರೆ, ನನಗೆ ಹೆಚ್ಚು ಪ್ರಚಾರ ಸಿಗುತ್ತಿರಲಿಲ್ಲ. ಜನರೂ ನನಗಾಗಿ ಸಮಯ ನೀಡುತ್ತಿರಲಿಲ್ಲ. ಕೆ.ಆರ್.ಮಾರುಕಟ್ಟೆ ಬಳಿ ಹೋಗಿ ಹಣ ಎಸೆದರೆ, ಹೆಚ್ಚು ಪ್ರಚಾರ ಸಿಗಬಹುದೆಂದು ಸ್ನೇಹಿತನ ಜೊತೆ ಸೇರಿ ಈ ರೀತಿ ಮಾಡಿದೆ‘ ಎಂದು ಆರೋಪಿ ಅರುಣ್ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ‘ಕಡಿಮೆ ಹಣದಲ್ಲಿ ಹೆಚ್ಚು ಪ್ರಚಾರ ಪಡೆಯುವುದು ಹೇಗೆ ? ಎಂಬುದನ್ನು ತೋರಿಸುವುದಷ್ಟೇ ನನ್ನ ಉದ್ದೇಶವಾಗಿತ್ತು. ಹೀಗಾಗಿ, ₹4,500 ಮೊತ್ತದ ₹ 10 ಮುಖಬೆಲೆಯ ನೋಟುಗಳನ್ನು ಎಸೆದಿದ್ದೆ. ಇದೀಗ ಎಲ್ಲೆಡೆಯೂ ನನ್ನದೇ ಸುದ್ದಿ’ ಎಂದು ಆರೋಪಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.