DAKSHINA KANNADA
ಮುಳುಗು ತಜ್ಞ ತಣ್ಣೀರುಬಾವಿಯ ದಾವೂದ್ ಸಿದ್ದೀಕ್ ಸಮುದ್ರಪಾಲು

ಮಂಗಳೂರು, ಎಪ್ರಿಲ್ 12: ತಣ್ಣೀರು ಬಾವಿ ಮುಳುಗು ತಜ್ಞರ ತಂಡದ ಸದಸ್ಯರಾಗಿ ಸಾಕಷ್ಟು ಜನರ ಪ್ರಾಣ ರಕ್ಷಿಸಿರುವ, ಮೃತದೇಹಗಳನ್ನು ಶೋಧ ಮಾಡಿರುವ ಮುಳುಗು ತಜ್ಞ ದಾವೂದ್ ಸಿದ್ದೀಕ್ ಸಮುದ್ರಪಾಲಾಗಿ ಮೃತಪಟ್ಟಿದ್ದಾರೆ.
ದಾವೂದ್ ಸಿದ್ದೀಕ್(39) ಗುರುವಾರ ಉಳ್ಳಾಲ ಸೋಮೇಶ್ವರ ಉಚ್ಚಿಲದಿಂದ ಮೀನುಗಾರಿಕೆಗೆ ತೆರಳಿದ್ದು, ಅಂದು ಪೂರ್ವಾಹ್ನ 11.30ರ ಸುಮಾರಿಗೆ ನಾಪತ್ತೆಯಾಗಿದ್ದರು. ಅವರ ಮೃತದೇಹವು ನಿನ್ನೆ ಬೆಳಗ್ಗೆ ತಲಪಾಡಿ ಮಂಜೇಶ್ವರ ಮಧ್ಯೆ ಕಡಲ ತೀರದಿಂದ 14 ನಾಟಿಕಲ್ ಮೈಲ್ ದೂರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಸ್ಥಳೀಯ ಮೀನುಗಾರರು ನೋಡಿ ಮೃತದೇಹವನ್ನು ದಡಕ್ಕೆ ತಂದು ಹಾಕಿದ್ದಾರೆ. ಮೃತದೇಹವನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಶವ ಮಹಜರು ನಡೆಯುತ್ತಿದೆ. ಸಮುದ್ರದಲ್ಲಿ, ನದಿಯಲ್ಲಿ ಯಾರೇ ಮುಳುಗಿದರೂ ಅತ್ತ ಧಾವಿಸಿ ಹಲವರ ಜೀವ ರಕ್ಷಣೆ, ಹಲವರ ಮೃತದೇಹ ಶೋಧ ಕಾರ್ಯದಲ್ಲಿ ಸಹಕರಿಸಿದ್ದ ದಾವೂದ್ ಸಿದ್ದೀಕ್ ಸಮುದ್ರಪಾಲಾಗಿರುವುದು ವಿಪರ್ಯಾಸವೇ ಸರಿ.