Connect with us

LATEST NEWS

ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋದಲ್ಲಿ ಡ್ರೋನ್‌ ದಾಳಿ!

ಮಾಸ್ಕೋ, ಮೇ 23: ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಬಳಿಕ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದನೆ ಬಗ್ಗೆ ವಾಸ್ತವಾಂಶ ವಿವರಿಸಲು ಡಿಎಂಕೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾಕ್ಕೆ ತೆರಳಿತ್ತು. ಭಾರತದ ನಿಯೋಗ ತೆರಳುತ್ತಿದ್ದ ಹೊತ್ತಿನಲ್ಲೇ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ ದಾಳಿ ನಡೆದಿದೆ.

ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್‌ ದಾಳಿ ನಡೆದ ಬಳಿಕ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಡಿಎಂಕೆ ನಾಯಕಿ ಕನಿಮೋಳಿ ಅವರ ನೇತೃತ್ವದ ಸರ್ವಪಕ್ಷ ನಿಯೋಗವು ಪ್ರಯಾಣಿಸುತ್ತಿದ್ದ ವಿಮಾನವು ಸಹ ತಡವಾಗಿದ್ದು, ಸಂಸದರ ನಿಯೋಗ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಕಳೆದ 3 ವರ್ಷಗಳಿಂದ ನಡೆಯುತ್ತಿದೆ. ಉಭಯ ರಾಷ್ಟ್ರಗಳು ಪದೇ ಪದೇ ಡ್ರೋನ್‌ಗಳನ್ನು ಬಳಸಿ ಪರಸ್ಪರ ದಾಳಿ ಮಾಡುತ್ತಿವೆ. ಆದ್ರೆ ಇಷ್ಟು ದಿನ ಮಾಸ್ಕೋ ಮೇಲೆ ಡ್ರೋನ್ ದಾಳಿಗಳು ಅಪರೂಪವಾಗಿತ್ತು. ಇತ್ತೀಚೆಗೆ ಡ್ರೋನ್ ದಾಳಿಗಳು ಹೆಚ್ಚಾಗಿವೆ. ರಷ್ಯಾದ ರಕ್ಷಣಾ ಸಚಿವಾಲಯವು ಉಕ್ರೇನ್‌ನ 112 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಇದರಲ್ಲಿ 24 ಡ್ರೋನ್‌ಗಳು ರಾಜಧಾನಿಯ ಕಡೆಗೆ ಬರುತ್ತಿದ್ದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಉಕ್ರೇನಿನ ಡ್ರೋನ್‌ ದಾಳಿಯ ನಂತರ ಮಾಸ್ಕೋ ಮತ್ತು ಇತರ ಪ್ರದೇಶಗಳಲ್ಲಿ 3 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದವು. ಕನಿಮೋಳಿ ಮತ್ತು ಐವರು ಸಚಿವರು ಇದ್ದ ಸರ್ವಪಕ್ಷ ನಿಯೋಗವು ʻಆಪರೇಷನ್ ಸಿಂಧೂರ್ʼ ಮತ್ತು ಭಯೋತ್ಪಾದನೆ ವಿರುದ್ಧದ ಭಾರತದ ಸಂದೇಶವನ್ನು ಜಗತ್ತಿಗೆ ಸಾರಲು ಹೊರಟಿತ್ತು. ಈ ವಿಮಾನವು ಸಹ ಸ್ವಲ್ಪ ಸಮಯದವರೆಗೆ ತಡವಾಯಿತು.

ಕನಿಮೋಳಿ ಅವರು ತಮ್ಮ ನಿಯೋಗದ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ದಕ್ಷಿಣ ಕನ್ನಡದ ಸಂಸದ ಬ್ರಿಜೇಶ್ ಚೌಟ, ಎಎಪಿ ಸಂಸದ ಡಾ. ಅಶೋಕ್ ಕುಮಾರ್ ಮಿತ್ತಲ್, ಮಾಜಿ ರಾಜತಾಂತ್ರಿಕ ಮಂಜೀವ್ ಪುರಿ ಮತ್ತು ಆರ್ಜೆಡಿ ಸಂಸದ ಪ್ರೇಮಚಂದ್ ಗುಪ್ತಾ ಇದ್ದಾರೆ.

ಸದ್ಯ ಹೊರಟಿರುವ ಕನಿಮೋಳಿ ನೇತೃತ್ವದ ನಿಯೋಗವು ರಷ್ಯಾದ ಅಧಿಕಾರಿಗಳಿಗೆ ಆಪರೇಷನ್‌ ಸಿಂಧೂರ ಬಗ್ಗೆ ಮಾಹಿತಿ ನೀಡಿದ ಬಳಿಕ ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್‌ಗೆ ಭೇಟಿ ನೀಡಲಿದೆ ಮತ್ತು ಎಲ್ಲಾ ರೀತಿಯ ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಸಾರಲಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *