LATEST NEWS
ಗಂಭೀರ ಸ್ವರೂಪ ತಾಳಿದ ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ
ಗಂಭೀರ ಸ್ವರೂಪ ತಾಳಿದ ಉಡುಪಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ
ಉಡುಪಿ ಮೇ 31: ಭಾರಿ ನೀರಿನ ಅಭಾವ ಎದುರಿಸುತ್ತಿರುವ ಉಡುಪಿ ಜಿಲ್ಲೆಯಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಾ ಸಾಗಿದೆ. ಹಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೂ ನೀರು ಸಿಗದ ಪರಿಣಾಮ, ಬೆಳಿಗ್ಗೆ ಶಾಲೆ ನಡೆಸಿ ಮಧ್ಯಾಹ್ನ ರಜೆ ನೀಡಲಾಗುತ್ತಿದೆ.
ಕಾರ್ಕಳ ತಾಲ್ಲೂಕು ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಶಾಲೆಗಳಲ್ಲಿ ಬಿಸಿಯೂಟಕ್ಕೆ ನೀರಿನ ಅಭಾವ ಎದುರಾಗಿದೆ. ಅಡುಗೆಗೆ ನೀರಿಲ್ಲದ ಪರಿಣಾಮ ಅಕ್ಷರ ದಾಸೋಹ ಸಿಬ್ಬಂದಿ ಕೆಲಸ ನಿಲ್ಲಿಸಿದ್ದಾರೆ. ಸಮಸ್ಯೆಯನ್ನು ಡಿಡಿಪಿಐ ಅವರ ಗಮನಕ್ಕೆ ತರಲಾಗಿದ್ದು, ಅವರ ಸೂಚನೆಯಂತೆ ಬೆಳಗಿನ ಶಾಲೆ ನಡೆಸಿ, ಮಧ್ಯಾಹ್ನ ಮಕ್ಕಳನ್ನು ಮನೆಗೆ ಊಟಕ್ಕೆ ಕಳುಹಿಸುವಂತೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ.
ಶೌಚಾಲಯ ಬಳಕೆಗೂ ನೀರು ಸಿಗುತ್ತಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರು ಅಕ್ಕಪಕ್ಕದ ಮನೆಗಳಿಂದ, ಗ್ರಾಮ ಪಂಚಾಯತ್‌ಗಳಿಂದ ನೀರು ಪಡೆದು ಬಳಸುತ್ತಿದ್ದಾರೆ. ಆದರೆ, ಬಿಸಿಯೂಟಕ್ಕೆ ಶುದ್ಧ ನೀರನ್ನು ಬಳಸಬೇಕಿರುವ ಕಾರಣ ಬಿಸಿ ಯೂಟವನ್ನು ನಿಲ್ಲಿಸಲಾಗಿದೆ.
ಬಿಸಿಯೂಟಕ್ಕೆ ನೀರು ಸರಬರಾಜು ಆಗುವವರೆಗೂ ಮಧ್ಯಾಹ್ನ ಶಾಲೆ ಮುಚ್ಚುವುದು ಅನಿವಾರ್ಯ. ಶಾಲೆ ತೆರೆದರೆ ಮಕ್ಕಳು ಹಸಿವೆಯಿಂದ ಬಳಲಬೇಕಾಗುತ್ತದೆ. ಮಳೆ ಬಿದ್ದರಷ್ಟೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯದೆ ಭಾರಿ ಸಮಸ್ಯೆ ಉಂಟಾಗಿದೆ. ಈ ನಡುವೆ ಮುಂಗಾರು ಜೂನ್ 6 ನಂತರ ಕೇರಳ ಪ್ರವೇಶಿಸುವುದರಿಂದ ಕರಾವಳಿಯಲ್ಲಿ ಮುಂಗಾರು ಮಳೆಯಾಗುವುದು ಜೂನ್ 8 ರ ನಂತರವೇ , ಅಲ್ಲಿಯವರೆಗೆ ಉಡುಪಿಯಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.