DAKSHINA KANNADA
ಡಾ. ಅಮೃತ ಸೋಮೇಶ್ವರ ರಿಗೆ ಭಾಷಾ ಸಮ್ಮಾನ್ ಪುರಸ್ಕಾರ ಪ್ರಧಾನ
ಮಂಗಳೂರು ಸೆಪ್ಟೆಂಬರ್ 15: ತುಳು ಜಾನಪದ ವಿದ್ವಾಂಸ ಹಾಗೂ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ 2016 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ ಅಮೃತ ಸೋಮೇಶ್ವರಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ ಚಂದ್ರಶೇಖರ ಕಂಬಾರ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಸನ್ಮಾನಿಸಿದರು.
ಮಂಗಳೂರು ಹೊರವಲಯದ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ತೆರಳಿದ ಹಿರಿಯ ಸಾಹಿತಿ ಡಾ ಚಂದ್ರಶೇಖರ ಕಂಬಾರ ಆಸ್ಪತ್ರೆಯ ಕೊಠಡಿಯೊಂದರಲ್ಲಿ ಡಾ ಅಮೃತ ಸೋಮೇಶ್ವರಗೆ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಸನ್ಮಾನಿಸಿದರು. ತುಳು ಭಾಷೆಯ ಸಮಗೃ ಅಭಿವೃದ್ಧಿಗಾಗಿ ಹಾಗೂ ತುಳು ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಮೃತ ಸೋಮೇಶ್ವರರಿಗೆ 2016 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಭಾಷಾ ಸಮ್ಮಾನ್ ಪ್ರಶಸ್ತಿ ಘೋಷಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ ಕಂಬಾರ , ನನ್ನ ಮತ್ತು ಅಮೃತ ಸ್ನೇಹ ಮೂರು ದಶಕಗಳಷ್ಟು ಹಳೆಯದು . ಅಮೃತರು ರಚಿಸಿದ ಪಾಡ್ದನಗಳನ್ನು ಅನುವಾದ ಮಾಡಿ ಕನ್ನಡದಲ್ಲಿ ಅದನ್ನು ಪ್ರಕಟ ಮಾಡಿದ್ದರಿಂದ ನನ್ನ ಸಂಬಂಧ ಬೆಳೆಯುತ್ತ ಬಂತು ಎಂದು ಹೇಳಿದ ಅವರು ನನ್ನ ಜೋಕುಮಾರ ಸ್ವಾಮಿ ಕೃತಿಯನ್ನು ಅಮೃತರು ತುಳು ಭಾಷೆಯಲ್ಲಿ ಅನುವಾದಿಸಿದ್ದು ಸಂತಸ ತಂದಿದೆ ಎಂದು ಅವರು ತಿಳಿಸಿದರು.