Connect with us

BELTHANGADI

ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಮೇಲೆ ಎಫ್ಐಆರ್

ಬೆಂಗಳೂರು ಮಾರ್ಚ್ 26: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಮತ್ತು ಹಲ್ಲೆ ಮಾಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯ ಪಿಎಸ್‌ಐ ಸೇರಿ ಅವರ ಕುಟುಂಬದ ನಾಲ್ವರ ವಿರುದ್ಧ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನಾಗರಬಾವಿ ನಿವಾಸಿ ಪಿಎಸ್‌ಐ ಪತ್ನಿ ವರ್ಷಾ (27) ನೀಡಿದ ದೂರಿನ ಮೇರೆಗೆ ಪಿಎಸ್‌ಐ ಪಿ.ಕಿಶೋರ್, ಅವರ ಸಹೋದರ ಪಿ.ಚಂದನ್, ಪೋಷಕರಾದ ಪುಟ್ಟಚನ್ನಪ್ಪ, ಸರಸ್ವತಮ್ಮ ಅವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವರ್ಷಾ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಪುಟ್ಟಚನ್ನಪ್ಪ ಕುಟುಂಬವು ನೆಲೆಸಿದೆ. 2024ರ ಫೆಬ್ರವರಿ 21ರಂದು ಪಿಎಸ್‌ಐ ಕಿಶೋರ್ ಜತೆ ವರ್ಷಾ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ₹10 ಲಕ್ಷ ನಗದು, ಹುಡುಗನಿಗೆ 135 ಗ್ರಾಂ ಚಿನ್ನದ ಆಭರಣ, ನನಗೆ 850 ಗ್ರಾಂ ಚಿನ್ನಾಭರಣ, 3 ಕೆ.ಜಿ. ಬೆಳ್ಳಿ ಆಭರಣ ನೀಡಿದ್ದರು. ಅದ್ದೂರಿಯಿಂದ ಮದುವೆ ಮಾಡಿಕೊಡಲು ಪೋಷಕರು ₹60 ಲಕ್ಷ ಖರ್ಚು ಮಾಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮದುವೆಯಾದ ಸಂದರ್ಭದಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪಿ.ಕಿಶೋರ್ ಕೆಲಸ ಮಾಡುತ್ತಿದ್ದರು. ಈ ಠಾಣೆಯಲ್ಲಿ ಯಾವುದೇ ಆದಾಯ ಇಲ್ಲ. ಬೇರೆ ಠಾಣೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು. ವರ್ಗಾವಣೆ ಮಾಡಿಸಿಕೊಳ್ಳಲು, ಮೇಲಾಧಿಕಾರಿಗಳಿಗೆ ಲಂಚ ಕೊಡಬೇಕು. ನಿಮ್ಮ ತಂದೆಯಿಂದ ₹10 ಲಕ್ಷ ತೆಗೆದುಕೊಂಡು ಬರುವಂತೆ ಹೇಳಿದ್ದರು. ಈಗಾಗಲೇ ಮದುವೆಗೆ ₹1 ಕೋಟಿ ಖರ್ಚಾಗಿದೆ. ಮತ್ತೆ ಹಣ ಕೇಳಿದರೆ, ತಂದೆ ಎಲ್ಲಿಂದ ಹಣ ತಂದು ಕೊಡುತ್ತಾರೆಂದು ಪ್ರಶ್ನಿಸಿದ್ದೆ. ಗನ್ ತೆಗೆದುಕೊಂಡು ಶೂಟ್ ಮಾಡಲು ಮುಂದಾಗಿದ್ದರು. ಧರ್ಮಸ್ಥಳಕ್ಕೆ ವರ್ಗಾವಣೆಯಾದ ಮೇಲೆ ಪೀಠೋಪಕರಣ ಖರೀದಿಗೆ ₹2 ಲಕ್ಷ ತೆಗೆದುಕೊಂಡು ಬರುವಂತೆ ಹೇಳಿದ್ದರು. ಅದಕ್ಕೆ ಒಪ್ಪದಿದ್ದಾಗ ವರದಕ್ಷಿಣೆ ವಿಚಾರವಾಗಿ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಲ್ಲಿದ್ದ ಲಟ್ಟಣಿಗೆಯಿಂದ ಹಲ್ಲೆ ಮಾಡಿದ್ದರು. ಇದೇ ತಿಂಗಳ 21ರಂದು ಕಿಶೋ‌ರ್ ಅವರು ರಾತ್ರಿ 9ರಿಂದ ಮಧ್ಯರಾತ್ರಿ 1 ಗಂಟೆಯವರೆಗೂ ಬೈಯ್ದು, ಪೊಲೀಸ್ ಬೆಲ್ಸ್‌ನಿಂದ ಹಲ್ಲೆ ನಡೆಸಿದ್ದಾರೆ. ಪೋಷಕರೊಂದಿಗೆ ಬೆಂಗಳೂರಿಗೆ ಬಂದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೇನೆ’ ಎಂಬುದಾಗಿ ದೂರಿನಲಿ ವರ್ಷಾ ಉಲೇಖಿಸಿದಾರೆ.

ಮದುವೆಯಾದ ಕೆಲ ತಿಂಗಳಲ್ಲಿಯೇ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಗಂಡ ಕಿಶೋರ್ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿದ್ದರು. ಗನ್ ಹಣೆಗೆ ಇಟ್ಟು ಕೊಲ್ಲುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಮಾ.21ರಂದು ರಾತ್ರಿ 9 ಗಂಟೆಯಿಂದ ತಡರಾತ್ರಿವರೆಗೂ ಜಗಳ ಮಾಡಿ ಹಲ್ಲೆಗೆ ಮುಂದಾದ ಕಿಶೋರ್, ಪೊಲೀಸ್ ಬೆಲ್ಟ್‌ನಿಂದ ದೇಹದ ಹಲವು ಭಾಗಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಚಪಾತಿ ಮಾಡುವ ಲಟ್ಟಣಿಗೆಯಿಂದ ಮುಖ ಸೇರಿದಂತೆ ಹಲವೆಡೆ ಹೊಡೆದಿದ್ದಾರೆ. ಅವರ ಹೊಡೆತಕ್ಕೆ ಕಿವಿಯಲ್ಲಿ ರಕ್ತಸ್ರಾವವಾಗಿತ್ತು. ತುಟಿಗೆ ಪೆಟ್ಟಾಗಿತ್ತು. ಅದೇ ದಿನ ರಾತ್ರಿ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ್ದರು ಎಂದು ವರ್ಷಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *