KARNATAKA
ರಾತ್ರಿ ಕರ್ಪ್ಯೂ ವಾಪಾಸ್ ಪಡೆದ ರಾಜ್ಯ ಸರಕಾರ…..!!
ಬೆಂಗಳೂರು ಡಿಸೆಂಬರ್ 24: ಕೊರೊನಾದ ಎರಡನೇ ಅಲೆ ತಡೆಗಟ್ಟಲು ಇಂದಿನಿಂದ ರಾತ್ರಿ ಕರ್ಪ್ಯೂ ಜಾರಿ ಮಾಡಿದ್ದ ರಾಜ್ಯ ಸರಕಾರ .. ಈಗ ತನ್ನ ಆದೇಶವನ್ನು ವಾಪಾಸ್ ಪಡೆದಿದ್ದು, ರಾತ್ರಿ ವಿಧಿಸಲಾಗಿದ್ದ ಕರ್ಪ್ಯೂವನ್ನು ಹಿಂಪಡೆದಿದೆ. ಈಗಾಗಲೇ ಕರ್ಪ್ಯೂ ವಿಚಾರದಲ್ಲಿ ಎರಡು ಬಾರಿ ಆದೇಶವನ್ನು ಬದಲಿಸಿದ್ದ ಸರಕಾರ ಈಗ ಮತ್ತೆ ತನ್ನ ಆದೇಶವನ್ನೆ ರದ್ದು ಮಾಡಿದೆ.
ಕೊರೊನಾ ಸೊಂಕಿನ ಎರಡನೇ ಅಲೆಯನ್ನು ತಡೆಯುವ ಹಿನ್ನಲೆ ಇಂದಿನಿಂದ ಜನವರಿ 2 ರವರೆಗೆ ರಾತ್ರಿ 11 ರಿಂದ ಮುಂಜಾನೆ 5 ರವರೆಗೆ ಸಂಪೂರ್ಣ ಕರ್ಪ್ಯೂವನ್ನು ಜಾರಿ ಮಾಡಿ ನಿನ್ನೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದರು. ಆದರೆ ರಾಜ್ಯ ಸರಕಾರದ ರಾತ್ರಿ ಕರ್ಪ್ಯೂ ಆದೇಶವನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸೇರಿದಂತೆ ಜನರು ಅಪಹಾಸ್ಯ ಮಾಡಿದ್ದು, ರಾತ್ರಿ ಮಾತ್ರ ಕೊರೊನಾ ಸೊಂಕು ಹರಡುತ್ತದೆಯೋ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ ಕರ್ಪ್ಯೂನ ಮಾರ್ಗದರ್ಶಿಯಲ್ಲಿ ನಿಯಮಗಳಲ್ಲಿ ಯಾವುದೇ ರೀತಿಯ ಕಟ್ಟುನಿಟ್ಟಿನ ಆದೇಶಗಳಿರದ ಹಿನ್ನಲೆ ಇದು ಕೇವಲ ಕಾಟಾಚಾರದ ಕರ್ಪ್ಯೂ ಎಂದು ಆರೋಪಿಸಲಾಗಿತ್ತು.
ಈ ಕುರಿತಂತೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕಫ್ರ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕಫ್ರ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.