DAKSHINA KANNADA
ಜ್ಯೋತಿಷಿ , ಬ್ಯಾಂಕ್ ನಿರ್ದೇಶಕ – ನಿಜ ಜೀವನದಲ್ಲೇ ಡಬಲ್ ರೋಲ್ ನಲ್ಲಿರುವ ವ್ಯಕ್ತಿ
ಪುತ್ತೂರು ಮಾರ್ಚ್ 02: ಸಿನೆಮಾಗಳಲ್ಲಿ ಒಬ್ಬ ವ್ಯಕ್ತಿ ಎರಡು ಮೂರು ವೇಷಗಳಲ್ಲಿ ಜೀವನ ನಡೆಸುತ್ತಿರು ದೃಶ್ಯಗಳು ಸರ್ವೇ ಸಾಮಾನ್ಯ, ಆದರೆ ನಿಜ ಜೀವನದಲ್ಲಿ ಈ ರೀತಿಯಲ್ಲಿ ಆದರೆ ಹೇಗೆ ಅನ್ನೊಂದು ಊಹಿಸಲು ಅಸಾಧ್ಯ, ಆದರೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಉಪ್ಪಿನಂಗಡಿಯ ಈ ವ್ಯಕ್ತಿ ಮಾತ್ರ ಡಬಲ್ ರೋಲ್ ಮಾಡುತ್ತಾರೆ. ಬೆಳಗ್ಗಿನಿಂದ ಮಧ್ಯಾಹ್ನದ ತನಕ ದೇವಸ್ಥಾನಗಳ ಆವರಣದಲ್ಲಿ ನಾಣ್ಯದ ಮೂಲಕ ಭವಿಷ್ಯ ಹೇಳುವ ಇವರು ಮಧ್ಯಾಹ್ಮದ ಬಳಿಕ ಪ್ಯಾಂಟು,ಶರ್ಟು ಧರಿಸಿ ಬೇರೆಯೇ ಲುಕ್ ನಲ್ಲಿ ಕಾಣಸಿಗುತ್ತಾರೆ. ಹಾಗಾದರೆ ಈ ವ್ಯಕ್ತಿ ಯಾರು, ಏನಿವರ ಡಬಲ್ ರೋಲ್ ಅನ್ನೋದನ್ನ ನೋಡುವ ಆಸಕ್ತಿಯೇ, ಬನ್ನಿ ಈ ಸ್ಟೋರಿ ನೋಡಿ.
ಇವರು ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಅಲಂಕಾರು ಬಲ್ಯ ನಿವಾಸಿ ಶೀನ ನಾಯ್ಕ. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಲ್ಲಿ ಒಬ್ಬರಾಗಿರುವ ಇವರು ಬೆಳಿಗ್ಗಿನಿಂದ ಮಧ್ಯಾಹ್ನದ ವರೆಗೆ ತನ್ನ ರೂಪವನ್ನು ಬದಲಿಸುತ್ತಾರೆ. ಹೌದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪು ಶಾಲು, ಕೆಂಪು ಬಣ್ಣದ ಲುಂಗಿಯುಟ್ಟು, ಕೊರಳಿಗೆ ಮಾಲೆ, ಕೈಯಲ್ಲಿ ತ್ರಿಶೂಲ ಹಿಡಿದು ವಿಚಿತ್ರವಾಗಿ ಕಾಣುವ ಇವರದು ನಾಣ್ಯ ಬಳಸಿ ಭವಿಷ್ಯ ಹೇಳುವ ಕಾಯಕ. ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಇವರ ಬಳಿಯೂ ಬಂದು ತಮ್ಮ ಭವಿಷ್ಯವನ್ನು ಕೇಳುತ್ತಿದ್ದು, ಭವಿಷ್ಯ ಕೇಳಿ ಸಂತೃಪ್ತಗೊಂಡವರು ಇವರಿಗೆ ಕಾಣಿಕೆಯನ್ನು ನೀಡಿ ತೆರಳುತ್ತಾರೆ. ಭವಿಷ್ಯ ಕೇಳಿ ಎಂದು ಯಾರಲ್ಲೂ ಅಂಗಲಾಚದ ಶೀನ ನಾಯ್ಕರು ತಮ್ಮ ಬಳಿಗೆ ಬರುವ ಮಂದಿಗೆ ತಮ್ಮ ವಿದ್ಯೆಯಿಂದ ಕಲಿತ ವಿಚಾರವನ್ನು ನೇರವಾಗಿ ತಿಳಿಸುತ್ತಾರೆ. ಸಮಸ್ಯೆಯ ಪರಿಹಾರಕ್ಕೆ ಕಾಳಿ ಮಾತೆಗೆ ಹರಕೆ ನೀಡಬೇಕು ಎನ್ನುವ ಪರಿಹಾರವನ್ನೂ ಸೂಚಿಸುತ್ತಾರೆ. ಭಕ್ತರು ನೀಡಿದ ಕಾಣಿಕೆಯಲ್ಲಿ ಕೇವಲ ಒಂದು ಭಾಗವನ್ನು ತನ್ನ ಜೀವನೋಪಾಯಕ್ಕಾಗಿ ಬಳಸುವ ಇವರು ಉಳಿದ ಬಹುಪಾಲು ಹಣವನ್ನು ದೇವಸ್ಥಾನಗಳಿಗೆ ನೀಡುತ್ತಾರೆ. ತಮಿಳುನಾಡು, ಆಂದ್ರಪ್ರದೇಶ,ಕೇರಳ ಮತ್ತು ಕರ್ನಾಟಕದ ಹಲವು ದೇವಸ್ಥಾನಗಳಿಗೆ ಇವರು ತಾನು ಸಂಪಾದಿಸಿದ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಸಾಮಾನ್ಯವಾಗಿ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾಣಸಿಗುವ ಇವರು, ಮಧ್ಯಾಹ್ನದ ಬಳಿಕ ತನ್ನ ಇನ್ನೊಂದು ಮುಖದಲ್ಲಿ ಪರಿಚಯವಾಗುತ್ತಾರೆ. ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿರುವ ಇವರು ಬ್ಯಾಂಕಿಗೆ ಸಂಬಂಧಪಟ್ಟ ಹಲವು ರೀತಿಯ ಕೆಲಸ ಕಾರ್ಯಗಳಲ್ಲಿ ಮಗ್ನನಾಗುತ್ತಾರೆ. ಬ್ಯಾಂಕಿನ ಆಡಳಿತ ನಿರ್ದೇಶಕರ ಸಭೆಗೆ ತಪ್ಪದೇ ಹಾಜರಾಗುವ ಇವರು ಬಡವರ ಪರವಾಗಿ ಕಾರ್ಯ ನಿರ್ವಹಿಸುತ್ತಾರೆ. ಕಳೆದ ಹಲವು ವರ್ಷಗಳಿಂದ ನಾಣ್ಯದ ಮೂಲಕ ಭವಿಷ್ಯ ಹೇಳುತ್ತಿರುವ ಶೀನ ನಾಯ್ಕ ಅವರು ಈವರೆಗೆ ಲಕ್ಷಾಂತರ ರೂಪಾಯಿಗಳನ್ನು ದಕ್ಷಿಣಕನ್ನಡ ಜಿಲ್ಲೆಯೊಳಗಿರುವ ಹಲವು ಪುಣ್ಯಕ್ಷೇತ್ರಗಳಿಗೆ ದೇಣಿಗೆ ನೀಡಿದ್ದಾರೆ. ಭವಿಷ್ಯ ಹೇಳಿ ಜನರನ್ನು ಮರಳು ಮಾಡಬೇಕು ಎನ್ನುವ ಯೋಚನೆಯನ್ನೂ ಎಂದಿಗೂ ಮಾಡದ ಇವರು ತಮ್ಮ ಬಳಿ ಬರುವ ಆಸ್ತಿಕರಿಗೆ ಭರವಸೆಯ ಮಾತುಗಳನ್ನು ಆಡಿ ಹುರಿದುಂಬಿಸುವ ಕೆಲಸದಲ್ಲೂ ನಿರತರಾಗಿದ್ದಾರೆ.