LATEST NEWS
ದೇವಸ್ಥಾನದಲ್ಲಿ ಸಾಮಾನ್ಯರಂತೆ ಹೂ ಕಟ್ಟಿದ ಕೇಂದ್ರ ಸಚಿವರ ಪತ್ನಿ
ದೇವಸ್ಥಾನದಲ್ಲಿ ಸಾಮಾನ್ಯರಂತೆ ಹೂ ಕಟ್ಟಿದ ಕೇಂದ್ರ ಸಚಿವರ ಪತ್ನಿ
ಪುತ್ತೂರು ಸೆಪ್ಟೆಂಬರ್ 30: ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಸಾಂಖ್ಯಿಕ ಮತ್ತು ಯೋಜನಾ ಖಾತೆ ಸಚಿವರಾಗಿರುವ ಡಿ.ವಿ.ಸದಾನಂದ ಗೌಡ ಅವರ ಪತ್ನಿ ಡಾಟಿ ಸದಾನಂದ ಗೌಡ ಅವರ ನವರಾತ್ರಿಯ ಅಂತಿಮ ದಿನವಾದ ಇಂದು ಶಕ್ತಿ ಸ್ವರೂಪಿಣಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಮನ್ಯ ಮಹಿಳೆಯರ ಜೊತೆ ಸಾಮಾನ್ಯರಂತೆ ಶ್ರೀ ದೇವಿಗೆ ಸಮರ್ಪಿಸಲ್ಪಡುವ ಹೂವು ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದರು.
ಕೋಡಿಂಬಾಡಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 21 ರಿಂದ ನವರಾತ್ರಿ ಉತ್ಸವ ನಡೆಯುತ್ತಿದೆ. ಇಂದು ಅಲ್ಲಿನ ಉತ್ಸವದ ಕೊನೆಯ ದಿನ. ನಿನ್ನೆ ಸಂಜೆಯೇ ದೇವಾಲಯಕ್ಕೆ ಆಗಮಿಸಿದ ಡಾಟಿ ಸದಾನಂದ ಗೌಡ ಅವರು ಅಲ್ಲಿನ ಉತ್ಸವಾದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅತ್ಯಂತ ಸರಳ ಉಡುಗೆಯಲ್ಲಿ ಸಾಮನ್ಯರಲ್ಲಿ ಅತೀ ಸಾಮನ್ಯರಂತೆ ಕಂಡ ಡಾಟಿ ಅವರು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಅಲ್ಲಿದ್ದ ಎಲ್ಲರ ಜೊತೆ ಬೆರೆತರು. ಅವರ ಎರಡು ದಿನದ ಭೇಟಿಯ ಸಂಧರ್ಭದಲ್ಲೂ ಯಾವುದೇ ಭದ್ರತಾ ಸಿಬ್ಬಂದಿಗಳು ಅವರ ಜೊತೆಗಿರಲಿಲ್ಲ.
ಡಿ.ವಿ.ಸದಾನಂದ ಗೌಡ ಪುತ್ರ ನಿಂದ ತುಲಾಭಾರ
ಇಂದು ಬೆಳಿಗ್ಗೆ ಡಿವಿ ಪುತ್ರ ಕಾರ್ತಿಕ್ ಗೌಡ ಅವರು ಮಠಂತಬೆಟ್ಟು ದೇವಾಸ್ಥಾನಕ್ಕೆ ಆಗಮಿಸಿ ತಾನು ಹೇಳಿಕೊಂಡ ಹರಕೆಯಾದ ತುಲಾಭಾರ ಸೇವೆಯನ್ನು ದೇವಿ ಸಮ್ಮುಖ ತೀರಿಸಿದರು. ತನ್ನ ಮನ ಸಂಕಲ್ಪದಂತೆ ಅಕ್ಕಿ ಮತ್ತು ಬೆಲ್ಲದಲ್ಲಿ ತುಲಾ ಭಾರ ಸೇವೆ ನೆರೆವೇರಿಸಿದರು. ಬೆಳಿಗ್ಗೆ 9.30 ಕಲಶ ಸ್ನಾನ ಮಾಡಿ ಬಳಿಕ ಸುಮಾರು 11ಗಂಟೆಗೆ ತುಲಾಭಾರ ಸೇವೆ ಗೈದರು.
ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುವ ಸಮಯದಲ್ಲಿ ಡಾಟಿ ಸದಾನಂದ ಗೌಡ ಅವರು ಕಾರ್ತಿಕ್ ಗೌಡ ಅವರ ಜೊತೆಗಿದ್ದರು. ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ,ಮೊಕ್ತೇಸರ ನಿರಂಜನ ರೈ ಮಠಂತಬೆಟ್ಟು, ಸುಮಾ ಅಶೋಕ್ ರೈ ಮತ್ತು ಸದಾನಂದಗೌಡ ಕುಟುಂಬಸ್ಥರು ಉಪಸ್ಥಿತರಿದ್ದರು.