KARNATAKA
ದೂಧ್ ಸಾಗರ ಜಲಪಾತಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ರೈಲ್ವೆ ರಕ್ಷಣಾ ಪಡೆ
ಹುಬ್ಬಳ್ಳಿ: ಮಳೆಗಾಲದಲ್ಲಿ ಅತೀ ಹೆಚ್ಚು ಪ್ರವಾಸಿಗರ ಆಕರ್ಷಣೆಗೆ ಒಳಗಾಗುವ ದೂಧ್ ಸಾಗರ ಜಲಪಾತಕ್ಕೆ ಪ್ರವಾಸಿಗರಿಗೆ ರೈಲ್ವೆ ರಕ್ಷಣಾ ಪಡೆ ನಿರ್ಬಂಧ ಹೇರಿದ್ದು, ಇದೀಗ ಪ್ರವಾಸಿಗರ ಅಸಮಧಾನಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್ ರಾಕ್ ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ದೂಧ ಸಾಗರ್ ಜಲಪಾತ ಮಳೆಗಾಲದ ಸಮಯದಲ್ಲಿ ದೇಶಾದ್ಯಂತ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ, ಆಗ ಜಲಪಾತಗಳು ತನ್ನ ಸಂಪೂರ್ಣ ವೈಭವಕ್ಕೆ ಮರಳುತ್ತವೆ. ಆದರೆ ರೈಲು ಮಾರ್ಗವನ್ನು ಹೊರತುಪಡಿಸಿ ಇತರರಿಗೆ ಪ್ರವೇಶಿಸಲಾಗದ ಸೂಕ್ಷ್ಮ ಘಾಟ್‌ಗಳಲ್ಲಿ ಪ್ರವಾಸಿಗರ ನೂಕು ನುಗ್ಗಲು ತಡೆಯುವ ನಿಟ್ಟಿನಲ್ಲಿ ಆರ್ ಪಿಎಫ್ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ.
ಆರ್‌ಪಿಎಫ್‌ನ ತಂಡ ಈಗ ಪ್ರವಾಸಿಗರನ್ನು ಬಂದ ರೈಲಿನಲ್ಲಿ ಗೋವಾ ಕಡೆಗೆ ವಾಪಸ್ ಕಳುಹಿಸುತ್ತಿದೆ ಮತ್ತು ಅವರನ್ನು ದೂಧ್ ಸಾಗರ್ ನಿಲ್ದಾಣದಲ್ಲಿ ಇಳಿಯಲು ಬಿಡುತ್ತಿಲ್ಲ. ಕಳೆದ ವಾರಾಂತ್ಯದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 400 ಮಂದಿಯನ್ನು ರೈಲಿಗೆ ಹತ್ತಿಸಿ ಗೋವಾಕ್ಕೆ ಕಳುಹಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ, ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಟ್ರೆಕ್ಕಿಂಗ್‌ಗಳಿಂದಾಗಿ ಜೀವಹಾನಿ, ರೈಲ್ವೆ ಆಸ್ತಿಗಳಿಗೆ ಹಾನಿ ಮತ್ತು ರೈಲು ಚಾಲನೆಯಲ್ಲಿ ಅಡೆತಡೆಗಳ ಘಟನೆಗಳು ನಡೆದಿವೆ. ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶವು ಭೂಕುಸಿತಕ್ಕೆ ಸಾಕ್ಷಿಯಾಗಿದೆ. ಈ ಹಿನ್ನಲೆ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.