LATEST NEWS
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಟಾಕ್ ರೂಂನಲ್ಲಿ ಮಲಗಿಸಿದ ವೈದ್ಯರು
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಟಾಕ್ ರೂಂನಲ್ಲಿ ಮಲಗಿಸಿದ ವೈದ್ಯರು
ಪುತ್ತೂರು ಸೆಪ್ಟೆಂಬರ್ 15: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ವೈದ್ಯರು ಉಪಚರಿಸದೆ, ಸ್ಟಾಕ್ ರೂಂನಲ್ಲಿ ಸ್ಟ್ರೇಚರ್ ನಲ್ಲಿ ಮಲಗಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.
ಪುತ್ತೂರು ಪೇಟೆಯ ದರ್ಬೆ ಎಂಬಲ್ಲಿ ಬೈಕ್ ಅಪಘಾತದಲ್ಲಿ ಒಬ್ಬಾತ ತೀವ್ರ ಗಾಯಗೊಂಡಿದ್ದು ಪಕ್ಕದಲ್ಲೇ ಇರುವ ಸರಕಾರಿ ಸಿಟಿ ಆಸ್ಪತ್ರೆಗೆ ವ್ಯಕ್ತಿಯನ್ನು ದಾಖಲಿಸಲಾಗಿತ್ತು. ಆದ್ರೆ ಅಲ್ಲಿದ್ದ ವೈದ್ಯರು ರೋಗಿಯನ್ನೇ ಗಮನಿಸದೆ ಬದುಕಿದ್ದಾನಾ ಸತ್ತಿದ್ದಾನಾ ಅಂತಾ ಸಾರ್ವಜನಿಕರ ಬಳಿಯೇ ಉಡಾಫೆಯ ಪ್ರಶ್ನೆ ಎತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಜೀವನ್ಮರಣ ಸ್ಥಿತಿಯಲ್ಲಿದ್ದ ಅಪರಿಚಿತ ವ್ಯಕ್ತಿ ಅಷ್ಟರಲ್ಲಿ ಮೃತಪಟ್ಟಿದ್ದ. ಒಂದು ಗಂಟೆ ಕಾಲ ಆಸ್ಪತ್ರೆಯ ಕಾರಿಡಾರ್ ನಲ್ಲೇ ಸ್ಟ್ರೇಚರ್ ಮೇಲೆ ಶವ ಇರಿಸಿದ್ದು, ನಂತರ ಆಸ್ಪತ್ರೆಯ ಡಿಸೇಲ್ ಸ್ಟಾಕ್ ಇಡೋ ಸ್ಟೇರ್ ಗ್ರಾಡ್ ಕೆಳಗೆ ಇರಿಸಿದ್ದಾರೆ ಎಂದು ಹೇಳಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ತಂದ ಸಾರ್ವಜನಿಕರ ಮೇಲೆಯೇ ಡ್ಯೂಟಿ ಡಾಕ್ಟರ್ ರೇಗಾಡಿದ್ದಲ್ಲದೆ, ಬೇರೆ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪುತ್ತೂರು ತಾಲೂಕು ಸರಕಾರಿ ಆಸ್ಪತ್ರೆಯಾಗಿದ್ದರೂ, ವೈದ್ಯರು ತುರ್ತು ಚಿಕಿತ್ಸೆಯನ್ನು ನೀಡಲು ಮುಂದಾಗದೆ, ಸಾರ್ವಜನಿಕರನ್ನೇ ದಬಾಯಿಸಿದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಾಕ್ ರೂಂ ನಲ್ಲಿ ಮೃತದೇಹ ಇರಿಸಿದ ಆಸ್ಪತ್ರೆ ಸಿಬ್ಬಂದಿ ವರ್ತನೆಗೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.