LATEST NEWS
ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಇನ್ನಿಲ್ಲ – ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ

ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಇನ್ನಿಲ್ಲ – ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ
ಚೆನೈ ಅಗಸ್ಟ್ 7: ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಇಂದು ವಿಧಿವಶರಾಗಿದ್ದಾರೆ.
ತಮಿಳು ನಾಡಿನ ಆರಾಧ್ಯ ದೈವ, ಮಾಜಿ ಮುಖ್ಯಮಂತ್ರಿ, ಕಲೈಙರ್ ಎಂ ಕರುಣಾನಿಧಿ 11 ದಿನಗಳ ಸಾವು ಬದುಕಿನ ನಡುವಿನ ಹೋರಾಟದ ನಂತರ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾವೇರಿ ಆಸ್ಪತ್ರೆಯ ಆಡಳಿತ ಮಂಡಳಿ ಅಧಿಕೃತ ಆದೇಶ ಹೊರಡಿಸಿದ್ದು, ತಮಿಳು ನಾಡಿನಾದ್ಯಂತ ಅಭಿಮಾನಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಕರುಣಾನಿಧಿ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ 6.10ಕ್ಕೆ ಕೊನೆಯುಸಿರೆಳೆದಿದ್ದಾರೆ.
ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಎಂಕೆ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಆಸ್ಪತ್ರೆ ಒಳಗೆ ಮತ್ತು ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ರಾಜರತಿನಂ ಸ್ಟೇಡಿಯಂನಲ್ಲೂ ಸುಮಾರು 1200 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ 500 ಸಶಸ್ತ್ರ ಪಡೆ ಮತ್ತು 700 ಸ್ಪೇಷಲ್ ಫೋರ್ಸ್ ಕಾರ್ಯ ನಿರ್ವಹಿಸುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ.