LATEST NEWS
ಮಂಗಳೂರು ಜಿ.ಆರ್ ಮೆಡಿಕಲ್ ಕಾಲೇಜು ಅಕ್ರಮ ಪ್ರವೇಶಾತಿ – ವಿಧ್ಯಾರ್ಥಿಗಳಿಗೆ ಬೇರೆ ಖಾಸಗಿ ಕಾಲೇಜಿನಲ್ಲಿ ಸೀಟ್ ನೀಡಲು ಹೈಕೋರ್ಟ್ ಆದೇಶ
ಮಂಗಳೂರು ಸೆಪ್ಟೆಂಬರ್ 30: ಮಂಗಳೂರಿನ ಜಿ.ಆರ್ ಕಾಲೇಜಿನಲ್ಲಿ 2023-24 ನೇ ಸಾಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿ ಪಡೆದಿರುವ ಎಲ್ಲಾ 99 ವಿಧ್ಯಾರ್ಥಿಗಳಿಗೆ ರಾಜ್ಯದ ಬೇರೆ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಕಲ್ಲಿಸಲಾಗುವುದು ಎಂದು ಹೈಕೋರ್ಟ್ ಗೆ ರಾಜ್ಯ ಸರಕಾರ ತಿಳಿಸಿದೆ.
2023-24 ನೇ ಸಾಲಿನಲ್ಲಿ ಎಂಬಿಬಿಎಸ್ ಕೋರ್ಸ್ ಗೆ ಯಾವುದೇ ನೇಮಕಾತಿ ಮಾಡಬಾರದೆಂದು ತಿಳಿಸಿದ್ದರೂ ಜಿ.ಆರ್ ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳ ಪ್ರವೇಶಾತಿ ಮಾಡಿತ್ತು, ಈ ನಡುವೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಜಿ.ಆರ್ ಕಾಲೇಜಿನಲ್ಲಿ ಮೆಡಿಕಲ್ ಸೀಟ್ ಪಡೆದಿರುವ ವಿಧ್ಯಾರ್ಥಿಗಳ ಪ್ರವೇಶಾತಿಯನ್ನು ಅಕ್ರಮ ಎಂದು ಘೋಷಿಸಿತ್ತು. ಈ ಹಿನ್ನಲೆ ತಮ್ಮ ಪ್ರವೇಶಾತಿಯನ್ನು ಬೇರೊಂದು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಬೇಕು. ಹಾಗೆಯೇ, ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ತಮಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಡಿ ಎಸ್ ಧಾತ್ರಿ ಸೇರಿದಂತೆ ಮಂಗಳೂರಿನ ಜಿ ಆರ್ ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರದ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರ ವಿದ್ಯಾರ್ಥಿಗಳು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದಾರೆ. ಹಾಗಾಗಿ, ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ನಡುವಿನ ಶುಲ್ಕಕ್ಕೆ ಬಹಳ ವ್ಯತ್ಯಾಸವಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋಟಾದ ಪ್ರಕಾರ ಬೇರೆ ಖಾಸಗಿ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗುವುದು. ರಾಜ್ಯದಲ್ಲಿ ಸುಮಾರು 24 ಖಾಸಗಿ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಅಫಿಡವಿಟ್ ಸಲ್ಲಿಸಲಾಗುವುದು ಎಂದು ತಿಳಿಸಿದರು.