LATEST NEWS
ಯಡಮೊಗೆ ಉದಯ್ ಗಾಣಿಗ ಕೊಲೆ ಪ್ರಕರಣ ಸಿಬಿಐಗೆ ವಹಿಸಿ – ಡಿಕೆ ಶಿವಕುಮಾರ್
ಉಡುಪಿ : ಇತ್ತೀಚಿಗೆ ಕೊಲೆಯಾದ ಬಿಜೆಪಿ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಅವರ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಯಡಮೊಗೆ ಉದಯ್ ಗಾಣಿಗ ಅವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಡಿಕೆ ಶಿವಕುಮಾರ್ ಒಂದು ಲಕ್ಷದ ಇಪ್ಪತೈದು ಸಾವಿರ ಮೊತ್ತದ ಚೆಕ್ ನ್ನು ನೀಡಿದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉದಯ್ ಗಾಣಿಗ ಒಂದೇ ಕೊಲೆಯಲ್ಲ, ಹಲವು ಕೊಲೆಗಳು ಆಗಿವೆ, ರಾಜ್ಯ ಸರಕಾರ ಎಲ್ಲಾ ಕೊಲೆಗಳನ್ನು ಮುಚ್ಚಿ ಹಾಕುವ ದೊಡ್ಡ ಪ್ರಯತ್ನ ಮಾಡುತ್ತಿದ್ದು, ಬೇರೆ ಕೊಲೆಗಳು ನಡೆದಾಗ ಸಿಬಿಐಗೆ ವಹಿಸಿದ್ದಾರೆ. ಈ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿ, ಸಾವಿಗೆ ನ್ಯಾಯ ದೊರಕಿಸಿ ಕೊಡಿ ಎಂದು ಸರಕಾರವನ್ನು ಆಗ್ರಹಿಸಿದರು.
ಉದಯ್ ಬಿಜೆಪಿ ಪಕ್ಷಕ್ಕೆ, ಬೆಳಗ್ಗೆ ಸಂಜೆ ದುಡಿದಿದ್ದಾನೆ ಅಂತ ಹೆಣ್ಣು ಮಗಳು ಹೇಳುತ್ತಾಳೆ. ಕೊಲೆ ಮಾಡಿದ್ದು, ಬಿಜೆಪಿಯ ಪಂಚಾಯತ್ ಅಧ್ಯಕ್ಷನೇ ಅಂತ ಹೇಳಿದ್ದಾಳೆ, ನ್ಯಾಯ ಒದಗಿಸಿ, ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು, ಈ ಕೊಲೆ ಪ್ರಕರಣದ ಕುರಿತಂತೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ, ಅಲ್ಲದೆ ಸಿಎಂ, ಗೃಹ ಸಚಿವರಲ್ಲಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಅಂತ ಒತ್ತಾಯಿಸುತ್ತೇನೆ ಎಂದರು.