UDUPI
ಅಪ್ರಾಪ್ತ ಬಾಲೆಯ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಅಪ್ರಾಪ್ತ ಬಾಲೆಯ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
ಉಡುಪಿ, ಡಿಸೆಂಬರ್ 11 :ಅಪ್ರಾಪ್ತ ಬಾಲೆಯ ಬಾಲ್ಯ ವಿವಾಹವನ್ನು ಅಧಿಕಾರಿಗಳು ಸಕಾಲದಲ್ಲಿ ತಡೆದಿದ್ದಾರೆ. ಉಡುಪಿ ತಾಲೂಕಿನ ನಗರಸಭಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಪೆರಂಪಳ್ಳಿಯಲ್ಲಿ ಪ್ರಭಾವತಿಯವರ ಅಪ್ರಾಪ್ತ ಮಗಳ ಮದುವೆ ದಿನಾಂಕ 11.12.2017ರಂದು 11 ಗಂಟೆಗೆ ಶ್ರೀಶ ಭಟ್ರ ಮನೆಯಲ್ಲಿ ನಡೆಯುವುದೆಂದು ನಿಶ್ಚಯಿಸಲಾಗಿತ್ತು.
ಈ ಮಾಹಿತಿ ತಿಳಿದ ತಕ್ಷಣವೇ , ಜಿಲ್ಲಾಧಿಕಾರಿಯವರ ಆದೇಶದಂತೆ ಅದನ್ನು ತಡೆಯಲು ಅಧಿಕಾರಿಗಳು ಮತ್ತು ಸಿಬಂದಿಗಳು ಅಪ್ರಾಪ್ತೆಯ ಮನೆಗೆ ಧಾವಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ತಹಶೀಲ್ದಾರರು ಮತ್ತು ಪೋಲಿಸ್ ಇಲಾಖೆಯ ವೃತ್ತ ನೀರೀಕ್ಷರು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ , ಮಕ್ಕಳ ರಕ್ಷಣಾ ಘಟಕ ಅಧಿಕಾರಿ, ಹಾಗೂ ಸಿಬ್ಬಂದಿಯವರು
ಭೇಟಿ ನೀಡಿದಾಗ ಮನೆಯಲ್ಲಿ ತಾಯಿ ಪ್ರಭಾವತಿ, ಹಾಜರಿದ್ದು ಮದುವೆಯ ಎಲ್ಲಾ ಸಿದ್ದತೆಗಳು ನಡೆದಿದ್ದು ಕುಟುಂಬ ಸಂಬಂಧಿಕರು ಇದ್ದರು.
ಹಾಜರಿದ್ದ ಬಾಲಕಿಯ ತಾಯಿ, ಸೋದರಮಾವ, ಅತ್ತೆ ಇವರೊಂದಿಗೆ ಚರ್ಚಿಸಿ 18 ವರ್ಷಕ್ಕೆ ಮುಂಚಿತವಾಗಿ ಮದುವೆ ಮಾಡಿದಲ್ಲಿ ಅದು ಬಾಲ್ಯ ವಿವಾಹ ಆಗುವುದಾಗಿ ತಿಳಿಸಲಾಯಿತು.
ಹಾಗೂ ಕಾನೂನು ರೀತಿ ಇರುವ ಶಿಕ್ಷೆ ಹಾಗೂ ಬಾಲ್ಯ ವಿವಾಹ ಮಾಡಿದ್ದಲ್ಲಿ ಉಧ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಯಿತು.
ಮಗಳ ವಯಸ್ಸನ್ನು ತಾಯಿಯೊಡನೆ ವಿಚಾರಿಸಿದಾಗ ಜನ್ಮದಿನಾಂಕ, ಆಧಾರ್‍ಕಾರ್ಡ್ ದಾಖಲಾತಿ ಪರಿಶೀಲಿಸಿ ಜನ್ಮ ದಿನಾಂಕವು 07.01.2001 ಆಗಿರುತ್ತದೆ.
ಅಪ್ರಾಪ್ತ ವಯಸ್ಸಿನವಳೆಂದು ಖಚಿತಪಡಿಸಿಕೊಳ್ಳಲಾಯ್ತು. ಈ ಬಗ್ಗೆ ತಾಯಿ ಮತ್ತು ಮಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮನವರಿಕೆ ಮಾಡಿದರು.
ತಾಯಿಯಿಂದ ಮಗಳಿಗೆ 18 ವರ್ಷ ಪೂರ್ತಿಯಾಗದೆ ವಿವಾಹ ಮಾಡಿಸುವುದಿಲ್ಲವೆಂಬ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ.
ನಂತರ ಅದಿಕಾರಿಗಳು ವಿವಾಹ ನಡೆಸಿಕೊಡುವ ಪುರೋಹಿತರಾದ ಶ್ರೀಶ ಭಟ್ರರನ್ನ ಭೇಟಿಮಾಡಿ ಈ ಮದುವೆಯ ಬಗ್ಗೆ ವಿಚಾರಿಸಿದರು.
ವಧುವಿನ ತಾಯಿ ಮದುವೆ ಮಾಡಿಸಲು ತಿಳಿಸಿದ್ದು ವಯಸ್ಸಿನ ಬಗ್ಗೆ ಪೋಷಕರಲ್ಲಿ ಕೇಳಿದಾಗ ಮದುವೆ ವಯಸ್ಸಾಗಿದೆ ದಾಖಲೆ ನೀಡುತ್ತೇವೆ ಎಂದು ತಿಳಿಸಿದ ಕಾರಣ ನಾನು ಮದುವೆ ಮಾಡಿಸಲು ಒಪ್ಪಿಕೊಂಡಿರುತ್ತೇನೆಂದು ಎಂದು ಹೆಳಿಕೆ ನೀಡಿದ ಪುರೋಹಿತರು,
ಈಗ ಅವಳಿಗೆ 18 ವರ್ಷ ಪೂರ್ತಿಯಾಗದೇ ಇರುವುದು ತಿಳಿದು ಬಂದಿದೆ. ಕಾನೂನು ರೀತಿ ತಪ್ಪೆಂದು ತಿಳಿದಿರುತ್ತೇನೆ.
ಇನ್ನು ಮುಂದೆ ದಾಖಲೆಯನ್ನು ಪರಿಶೀಲಿಸಿ, ವಯಸ್ಸನ್ನು ಖಚಿತ ಪಡಿಸಿಕೊಂಡೇ ವಿವಾಹ ಮಾಡಿಸುವುದಾಗಿ ಲಿಖಿತವಾಗಿ ಮುಚ್ಚಳಿಕೆಯನ್ನು ನೀಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.