LATEST NEWS
ದಿನದ ಕಥೆ- ಭಯದ ಸಾವು
ಭಯದ ಸಾವು
ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇರಿದರು .ಆ ರಸ್ತೆಯಲ್ಲಿ ನೀರು ಏರುತ್ತಲೇ ಇತ್ತು.
ಆಗಲೇ ಅವಳು ರಸ್ತೆ ದಾಟಲು ಆರಂಭ ಮಾಡಿದಳು. ಅಲ್ಲಿದ್ದ ಯುವಕರು ಬಿಡುತ್ತೇವೆ ಎಂದರೂ ಕೇಳದೆ , ನಿಲ್ಲೂ ಎಂದರೂ ನಿಲ್ಲುದೆ ಹೆಜ್ಜೆ ಹಾಕಿದಳು .ನೀರು ಅಲ್ಲಲ್ಲಿ ಸುಳಿಗಳನ್ನು ಎಬ್ಬಿಸುತ್ತಾ ಸಾಗುತ್ತಿತ್ತು. ಕನಸಿನ ಗೋಪುರವು ಅವಳ ಮನದಲ್ಲಿ ,ಸಂಭ್ರಮದ ಕಾಲುಜಾರಿಸುತ್ತಲೇ ದಾಟುತ್ತಿದ್ದಳು. ಮಣ್ಣಿನ ಬಣ್ಣದ ಕೆಸರಿನಲ್ಲಿ ಪಾದಗಳು ಇಡುವ ಮುಂದಿನ ಹೆಜ್ಜೆ ಕಾಣುತ್ತಿರಲಿಲ್ಲವಾದ್ದರಿಂದ ಊಹನೆಯ ಹೆಜ್ಜೆಯೊಂದಿಗೆ ದಾರಿ ಸಾಗುತ್ತಿತ್ತು.
ಮುಂದಿನ ಹತ್ತು ಹೆಜ್ಜೆಯಲ್ಲಿ ನೆಲ ಕಾಣುತ್ತಿತ್ತು. ಕಲ್ಲೊಂದು ಎಡವಿ ನೀರೊಳಗೆ ಜಾರಿದಳು. ನೀರು ಸುಳಿಯೊಂದಿಗೆ ಅವಳನ್ನೇ ತಿರುಗಿಸಿತು. ಉಸಿರು ನೀರೊಳಗೆ ನಿಂತಿತು. ಜನ ಸೇರಿದರು ದೇಹ ದೂರ ಚಲಿಸಿತು. ಗಂಟೆಗಳ ನಂತರ ಒದ್ದೆ ಕಟ್ಟಿಗೆಯನ್ನು ಉರಿಸುತ್ತ ದೇಹ ದಹಿಸಿತು. ಸೊಂಟದವರೆಗಿನ ಆಳದ ಗುಂಡಿಯಲ್ಲಿ ಅವಳ ಪ್ರಾಣ ಹೋಗಿತ್ತು .ಸಾವಿಗೆ ಭಯ ಕಾರಣವಾಗಿತ್ತು. ಇದನ್ನ ಸುಶಾಂತ ನನಗೆ ವಿವರಿಸುತ್ತಿದ್ದ.
ಆಗ ನನ್ನೊಳಗೆ ನಾನೊಂದು ಪ್ರಶ್ನೆ ಕೇಳಿಕೊಂಡೆ” ನಾನು ಕೂಡ ಸೊಂಟದವರೆಗಿನ ಸಮಸ್ಯೆಯಲ್ಲಿ ತಲೆಯನ್ನು ಮುಳುಗಿಸಿ ಒದ್ದಾಡುವುದಕ್ಕಿಂತ ಒಮ್ಮೆ ಎದ್ದು ನಿಂತರೆ ಉಸಿರೆಳೆದು ಯೋಚಿಸಿ ಪರಿಹಾರ ಹುಡುಕಬಹುದು ಅಲ್ವಾ?”. ಬದುಕುವ ದಾರಿ ನಾನೇ ಹುಡುಕಬೇಕಲ್ವಾ?…..
ಧೀರಜ್ ಬೆಳ್ಳಾರೆ