LATEST NEWS
ದಿನಕ್ಕೊಂದು ಕಥೆ- ಮ(ಗು)ಣ್ಣು
ಮ(ಗು)ಣ್ಣು
ಮಣ್ಣು ಅಳುತ್ತಿದೆ .ನಮ್ಮ ಕಿವಿಗಳಿಗೆ ಕೇಳುತ್ತಿಲ್ಲ. ಟಿವಿಗಳ ಬೊಬ್ಬೆ, ಹೋರಾಟದ ಕಿಚ್ಚು, ಸುದ್ದಿಗಳ ತಲ್ಲಣವೇ ತುಂಬಿರುವಾಗ ಅಳುವಿನ ಕೂಗು ಕೇಳೋದು ಹೇಗೆ ಅಲ್ವಾ?. ನೀಲಾಕಾಶದ ಕೆಳಗೆ ಜೀವಂತವಾಗಿ ಪಡಿಸಿರುವ ನೆಲ ಕಾಯುತ್ತಿದೆ ಮುಕ್ತಿ ನೀಡಲು. ಅದಕ್ಕೆ ಹೆಜ್ಜೆ ಸಪ್ಪಳ ಕೇಳುತ್ತಿದೆ ದೂರದಿಂದ.
ಹೆಜ್ಜೆಯಲ್ಲಿ ದುಃಖವಿದೆ ,ಹಸಿವಿದೆ. ಬರುತ್ತಿರುವವರ ಹೆಗಲಮೇಲೆ ಶವವಿದೆ .ಇದು ಕ್ರೂರ ವಿಶೇಷಣವಾಯಿತು ಅಂತ ಕಾಣುತ್ತೆ. ಶವವಲ್ಲ ಮಗುವಿದೆ ಆದರದು ಉಸಿರು ನಿಲ್ಲಿಸಿದೆ. ರೋಗದಿಂದಲೂ ಅಲ್ಲ, ಆಹಾರದಿಂದಲೂ ಅಲ್ಲ. ಶಬ್ದದಿಂದ. ಹಣವನ್ನು ಕಂತೆಗಳಲ್ಲಿ ಎಣಿಸುವ ಕಲ್ಲು ಹೊಡೆಯುವ ಕಾರ್ಖಾನೆಯ ಕಲ್ಲಿನ ಒಳಗೆ ಇರಿಸಿದ ಗ್ರೇನೇಡಿನ ಸ್ಫೋಟದ ಸದ್ದಿಗೆ ತೊದಲ ನುಡಿಯ ಮೃದು ಚರ್ಮದ ಮಗುವಿನ ಎದೆಯ ಶಬ್ದ ನಿಂತಿದೆ.
ಬದುಕಿನ ಚಿಗುರು ಬಾಡಿತು. ಆಸೆಗಳ ಕಂಗಳಲ್ಲಿ ನೀರು ತುಂಬಿತು. ಜೀವನದುದ್ದಕ್ಕೂ ನಡೆಯಬೇಕಾಗಿದ್ದ ಪುಟ್ಟ ಜೀವವನ್ನ ಹೊತ್ತು ಮಸಣದೆಡೆಗೆ ನಡೆದರವರು. ಮಣ್ಣು ಕಾಯುತ್ತಿತ್ತು ದೇವರನ್ನು ಅಪ್ಪಿಕೊಳ್ಳಲು. ಹಾರೆ ಗುದ್ದಲಿಗಳು ಇರಿದವು, ಮಣ್ಣು ಸಡಿಲವಾಯಿತು .ಮಗು ಮಣ್ಣಿನ ಮಡಿಲಿಗೆ ಸೇರಿತು. ಹೊರಟ ಹಿರಿ ಜೀವಗಳನ್ನು ತಡೆದು ನಿಲ್ಲಿಸಿದ ಬುದ್ಧಿ ತಿಳಿದ ಅನಾಗರಿಕನೊಬ್ಬ. ಭೂಮಿಯ ಮೇಲೆ ಹಕ್ಕು ಸ್ಥಾಪಿಸಿ ಮಗುವನ್ನ ಮತ್ತೆ ತೆಗೆದುಕೊಳ್ಳುಲು ಆಜ್ಞೆ ನೀಡಿದ. ಮಣ್ಣು ರೋಷ ತಾಳುತ್ತಿತ್ತು .ಅವನ ಕೊನೆಗೆ ಮಣ್ಣು ಜಾಗ ನೀಡದಿರಲು ನಿರ್ಧರಿಸಿತು.ಮಣ್ಣು ಬಂಜೆಯಂತೆ ಅಳಲಾರಂಭಿಸಿತು ನಮಗೆ ಆಳು ಕೇಳಲೇ ಇಲ್ಲ ……
ಧೀರಜ್ ಬೆಳ್ಳಾರೆ