LATEST NEWS
ದಿನಕ್ಕೊಂದು ಕಥೆ- ಇದ್ಯಾಕಪ್ಪ ಹೀಗೆ
ಇದ್ಯಾಕಪ್ಪ ಹೀಗೆ
ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ.ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ .ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು ಸಿಕ್ತು.
ಅಲ್ಲಿ ರಸ್ತೆಯ ಎರಡೂ ಬದಿ ಜನ ಸಾಲುಗಟ್ಟಿ ನಿಂತಿದ್ದರು. ರಸ್ತೆಯಲ್ಲಿ ವಾಹನವಿಲ್ಲ ಯಾವ ಮೆರವಣಿಗೆಯೋ ಗೊತ್ತಾಗ್ಲಿಲ್ಲ. ಸಣ್ಣ ಸಂದಿ ತೂರಿ ಗಮನಿಸಿದೆ. ಪಕ್ಕದಲ್ಲಿದ್ದವನ ಕೇಳಿದಾಗ “ಜೀರೋ ಟ್ರಾಫಿಕ್ ಮಾಡಿದ್ದಾರೆ. ಒಬ್ಬಳಿಗೆ ಹುಷಾರಿಲ್ಲ ಬೆಂಗಳೂರಿಗೆ ಬೇಗ ಸಾಗಬೇಕು ಅದಕ್ಕೆ” ದೂರದಲ್ಲಿ ಸೈರನ್ ಸದ್ದು ಕೇಳಿತು.
ವೇಗಕ್ಕೆ ಸೆಡ್ಡು ಹೊಡೆದ ರೀತಿ ಗಾಡಿಗಳ ಚಕ್ರ ತಿರುಗುತ್ತಿತ್ತು. ಕ್ಷಣಮಾತ್ರದಲ್ಲಿ ಗಾಡಿಗಳು ಸಾಗಿದವು. ಮುಂದೆ ಒಂದು ಪೊಲೀಸ್ ಗಾಡಿ ಇನ್ನೆರಡು ಸಣ್ಣ ಆಂಬುಲೆನ್ಸ್ , ಒಂದು ಅವಳಿರುವ ಆಂಬುಲೆನ್ಸ್ ಅಂತ ಕಾಣುತ್ತೆ. ಇದೆಲ್ಲಾ ಅಗತ್ಯಗಳು, ಆದರೆ ಇನ್ನುಳಿದಂತೆ ಅದನ್ನು ಹಿಂಬಾಲಿಸಿದ ಒಂದು ಕಾರು ಇನ್ನೆರಡು ದೊಡ್ಡ ಕಾರು ಅದರ ಕಿಟಕಿಯಿಂದ ಹೊರಗಡೆ ನೇತಾಡುತ್ತಿರುವ , ಕಿರುಚಾಡುತ್ತಿರುವ ಯುವಕರು ಇದ್ಯಾಕೋ ಅರ್ಥವಾಗಿಲ್ಲ.
ಏನಾದರೂ ಸಂಭವಿಸಿದರೆ ಒಂದು ಪ್ರಾಣದ ಉಳಿವಿಗೆ 10 ಪ್ರಾಣದ ಬಲಿ! ಇದ್ಯಾವ ಸಮಾಜಸೇವೆಯೂ? ಅರ್ಥವಾಗಲಿಲ್ಲ .
ಯುವಜನತೆ ಒಂದಾಗಿದ್ದಾರೆ ಜಾತಿ-ಧರ್ಮ ಮರೆತು ಜೀವ ಉಳಿಸುತ್ತಿದ್ದಾರೆ ಅಂತ ಹೆಮ್ಮೆ ಪಡಲೋ….. ಇವರ ಶೋಕಿಗಳಿಗೆ, ಅಸಂಬದ್ಧ ಕೆಲಸಗಳಿಗೆ ವ್ಯಥೆ ಪಡಲೋ ಗೊತ್ತಾಗುತ್ತಿಲ್ಲ?. ಮನೆಯಲ್ಲಿ ಹೆಂಡತಿ ಕಾಯ್ತಾ ಇರಬಹುದು. ನನ್ನ ಬಸ್ಸು ಬರುವ ಸಮಯ ಆಯ್ತು …
ಧೀರಜ್ ಬೆಳ್ಳಾರೆ