LATEST NEWS
ದಿನಕ್ಕೊಂದು ಕಥೆ- ಮುಂದೇನು?
ಮುಂದೇನು?
ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್ನು ಆಹುತಿ ಪಡೆಯುತ್ತಾ ಒಂದೊಂದು ಹೆಜ್ಜೆಗಳನ್ನಿಡುತ್ತಾ ಒಳಸಾಗಿ ಕತ್ತಲೆಯ ಕಾಡಿಗೆ ನಗರದ ಬೆಳಕು ನೀಡಲು ಉತ್ಸುಕನಾದಂತೆ ಆಗಮಿಸಿತು.
ಹಸಿವಿನ ತಣಿಸುವಿಕೆಯ ಅರಿವಿದ್ದ ಕಾಡಿನೊಳಗಿನ ಮನುಷ್ಯ ಜೀವಿಗಳಿಗೆ ನಗರದ ಅಭಿವೃದ್ಧಿಯ ಹಸಿವಿನ ಬಗ್ಗೆ ಅರಿವಿರಲಿಲ್ಲ. ಹಸಿರು ಒಂದೇ ಅವರ ಕಣ್ಣೊಳಗೆ ಪವಡಿಸಿತ್ತು. ಧಾವಂತ ನಗರಿಯ ಬೆಳಕು ಕಣ್ಣೊಳಗೆ ಅಡರಿ ಹೆಜ್ಜೆಗಳು ಹಸಿರು ಬಿಟ್ಟು ರಸ್ತೆಯೇರಿದವು. ಬದುಕಿನ ಕ್ರೂರತೆಗೆ ಆರೋಗ್ಯ ಏರುಪೇರಾಗಿ ಹಲವು ಚಿತೆಗಳುರಿದವು.ಕಾಡಿನ ಮಧ್ಯದಲ್ಲಿ ಇದ್ದವರು ಮದ್ಯದ ದಾಸರಾಗಿ ಕೆಲಸ ಮರೆತು ನಶೆಯೊಳಗೆ ತೇಲಿದರು.
ಸಾವಿರವಿದ್ದು ಸಂಖ್ಯೆ ನೂರಕ್ಕೆ ಇಳಿಯಿತು. ಕಾಡಿನ ಮರಗಳೇ ದಿಮ್ಮಿಗಳ ಆಗುತ್ತಿರುವಾಗ ಮನುಷ್ಯನ ಪಾಡೇನು. ಚುನಾವಣೆಗೆ ಒಮ್ಮೆ ಇವರ ಬದುಕನ್ನ ಗುರುತಿಸಿ ಮತ್ತೆ ಮರೆಯುತಿದ್ದಾರೆ. ಬೆಂಕಿಯ ಕೆನ್ನಾಲಿಗೆ ಹೆಚ್ಚಿದೆ, ಮೊದಲು ಹಸಿರನ್ನು ಉಳಿಸಬೇಕು?. ಸದ್ಯಕ್ಕೆ ನಾನು ಕಥೆ ಬರೆಯುವುದನ್ನು ಬಿಟ್ಟು ಬೇರೆ ಏನು ಮಾಡಬೇಕು ಗೊತ್ತಾಗ್ತಿಲ್ಲ .
ಧೀರಜ್ ಬೆಳ್ಳಾರೆ