Connect with us

    LATEST NEWS

    ಎಮ್ ಆರ್ ಪಿ ಎಲ್ ಉದ್ಯೋಗ ವಂಚನೆ ವಿರುದ್ದ – ಜೂನ್ 5 ರಂದು ಮನೆ ಮನೆ ಪ್ರತಿಭಟನೆ

    ಮಂಗಳೂರು ಮೇ31: ಮಂಗಳೂರಿನ ಎಂಆರ್ ಪಿಎಲ್ ಸಂಸ್ಥೆಯಲ್ಲಿ ಉದ್ಯೋಗ ನೀಡಿಕೆಯಲ್ಲಿ ಕರಾವಳಿಗರನ್ನು ಕಡೆಗಣಿಸಿರುವ ವಿರುದ್ದ ಜೂನ್ 5 ರಂದು ಮನೆ ಮನೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಡಿವೈಎಫ್ಐ ಮುಖಡ ಮನೀರ್ ಕಾಟಿಪಳ್ಯ ತಿಳಿಸಿದ್ದಾರೆ.


    ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು ಎಮ್ ಆರ್ ಪಿ ಎಲ್ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಮಾಡಿರುವ ವಂಚನೆಯ ವಿರುದ್ದ ನಾಡಿನ ಜನತೆ ಒಕ್ಕೊರಲ ವಿರೋಧ ದಾಖಲಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ ರಾಜಕಾರಣದ ಮಿತಿಗಳನ್ನು ದಾಟಿ ತುಳುನಾಡಿನ ಜನತೆ ನಡೆಸಿದ ವ್ಯಾಪಕ ಪ್ರತಿರೋಧ ಸತತವಾಗಿ ಚುನಾವಣೆಯಲ್ಲಿ‌ ಗೆಲ್ಲುತ್ತಾ, ಬರೀ ಭರವಸೆಯಲ್ಲೇ ಕಾಲ ತಳ್ಳುತ್ತಾ ಬಂದಿರುವ ಆಳುವವರ ನಿದ್ದೆಗೆಡಿಸುವಲ್ಲಿ ಯಶಸ್ವಿಯಾಗಿತ್ತು.


    ಆದರೆ ಇದೀಗ ನಮ್ಮ ಉದ್ಯೋಗದ ಹಕ್ಕಿನ ಧ್ವನಿಯನ್ನು ಕುಗ್ಗಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಸರಕಾರದ ಭಾಗವಾಗಿರುವ ಸಂಸದರು, ಉಸ್ತುವಾರಿ ಸಚಿವರು, ಶಾಸಕರುಗಳು ಕಂಪೆನಿಯ ಆಡಳಿತದ ಪ್ರಮುಖರ ಜೊತೆ ಮಾತುಕತೆಯ ನಾಟಕ ನಡೆಸಿ “ನೇಮಕಾತಿ ಪ್ರಕ್ರಿಯೆಗೆ ತಡೆ ಹೇರಲಾಗಿದೆ, ಹೊಸ ಪ್ರಕ್ರಿಯೆ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ’ ಎಂದು ಪ್ರಕಟಿಸಿದರು. ಅದರೆ, ಸಚಿವರು, ಸಂಸದ, ಶಾಸಕರ ಪ್ರಕಟನೆ ಹೊರಟು ಇದೀಗ ಹತ್ತು ದಿನಗಳು ಕಳೆದಿವೆ. ಕಂಪೆನಿಯ ಒಳಗಡೆ ನೇಮಕಾತಿ ಗೊಂಡ ಹೊರ ರಾಜ್ಯದವರು ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಅಂತಿಮ ಹಂತದ ಪ್ರಕ್ರಿಯೆ ಭರದಿಂದ ಮುಂದುವರಿದಿದೆ. ಭರವಸೆ ನೀಡಿದ್ದ ಜನಪ್ರತಿನಿಧಿಗಳ ತಮ್ಮ ಮಾತುಗಳನ್ನೇ ಮರೆತು ಈಗ ಮೌನಕ್ಕೆ ಶರಣಾಗಿದ್ದಾರೆ.

    ಈ ಹಿನ್ನಲೆಯಲ್ಲಿ MRPL ಈಗ ನಡೆದಿರುವ ನೇಮಕಾತಿಯನ್ನು ರದ್ದುಗೊಳಿಸಬೇಕು, ಸಂಸದರು, ಶಾಸಕರುಗಳು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳ ಅಧಾರದಲ್ಲಿ ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸಿಕೊಡಬೇಕು, ಎಲ್ಲಾ ಕೈಗಾರಿಕೆ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ನೇಮಕಾತಿಯಲ್ಲಿ ಪ್ರಾಧಾನ್ಯತೆ, ಸಿಂಹಪಾಲು ದೊರಕಬೇಕು ಎಂದು ಒತ್ತಾಯಿಸಿ ಜೂನ್ 5, 2021 ರಂದು ತುಳುನಾಡು ಜಿಲ್ಲೆಗಳಲ್ಲಿ “ಸ್ಥಳೀಯರ ಉದ್ಯೋಗದ ಹಕ್ಕಿಗಾಗಿ” ಧ್ವನಿ ಎತ್ತಲು ಬಯಸುವ ಸಮಾನ ಮನಸ್ಕ ಸಂಘಟನೆಗಳೆಲ್ಲ ಜೊತೆ ಸೇರಿ “ಮನೆ ಮನೆ ಪ್ರತಿಭಟನೆ”ಯನ್ನು ಆಯೋಜಿಸಿದ್ದೇವೆ. ನಮ್ಮ ಬೇಡಿಕೆಯ ಕುರಿತು ಸಹಮತವುಳ್ಳ ಸಂಘಟನೆಗಳು, ಸಂಸ್ಥೆಗಳು, ವ್ಯಕ್ತಿಗಳು ಈ ಮಹತ್ವದ ಹೋರಾಟದ ಭಾಗವಾಗಬಹುದು. ಜೂನ್ 5 ರಂದು ತುಳುನಾಡಿನ ಜನತೆ ಈ ಕೆಳಗಿನ ಬೇಡಿಕೆಗಳ ಪೋಸ್ಟರ್ ಗಳನ್ನು ಬರೆದು, ಅಥವಾ ಪ್ರಿಂಟ್ ತೆಗದು ತಮ್ಮ ಮನೆಗಳ ಮುಂಭಾಗ ಏಕಾಂಗಿಯಾಗಿ/ ಕುಟುಂಬ ಸಮೇತರಾಗಿ ಹಿಡಿದು ಪ್ರತಿಭಟನೆ ನಡೆಸಬೇಕು. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬೇಕು, ನಿಮ್ಮ ಪರಿಚಿತರು, ನೆರೆಹೊರೆಯವರೂ ಈ ಪ್ರತಿಭಟನೆಯಲ್ಲಿ ಭಾಗಿಯಾಗುವಂತೆ ಮನವೊಲಿಸಬೇಕು. (ಎಲ್ಲಿಯೂ ಕೋವಿಡ್ ಮಾರ್ಗ ಸೂಚಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬೇಕು) ಆ ಮೂಲಕ ತುಳುನಾಡಿನಾದ್ಯಂತ ಇದು ಒಕ್ಕೊರಲಿನ ಹಕ್ಕಿನ ಧ್ವನಿಯಾಗಿ, ಸ್ವಾಭಿಮಾನದ ಕೂಗಾಗಿ ಮಾರ್ಪಾಡಾಗುವಂತೆ, ಅಭಿವೃದ್ದಿಯಲ್ಲಿ ನಮ್ಮ ನ್ಯಾಯಯುತ ಪಾಲು ಮುಂದೆ ಯಾವತ್ತೂ ನಿರಾರಣೆಯಾಗದಂತೆ ಪ್ರಬಲ ಕಾಯ್ದೆ ರಚನೆಗೆ ಇದು ನಾಂದಿಯಾಗಲು ಜೊತೆಗೂಡಬೇಕು ಎಂದು ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply