LATEST NEWS
ದಿನಕ್ಕೊಂದು ಕಥೆ- ವೇಷ
ವೇಷ
ಕುದಿಯುತ್ತಿದೆ ದೇಹ .ಬಿಸಿಗೆ ಮೈಯ್ಯೊಳಗಿನ ನೀರ ಬಿಂದುಗಳು ತೆರೆದು ಹೊರಬಂದು ಧಾರೆಯಾಗಿ ಹರಿಯುತ್ತಿದೆ. ಚಳಿಗೆ ಪಾದದಡಿ ಬಿಟ್ಟ ಬಿರುಕುಗಳಿಂದ ನೆತ್ತರಿಣುಕಿದೆ. ಕುಣಿಯದಿದ್ದರೆ ಕಾಸಿಲ್ಲ. ಧರಿಸಿರೋ ಗೊಂಬೆಯ ಬಟ್ಟೆ ಬಣ್ಣದಿಂದ ಮಿನುಗಿದೆ, ಮಂದಹಾಸ ಬೀರುತ್ತಿದೆ ಗೊಂಬೆಯ ಮೊಗ.
ಅವನದ್ದಲ್ಲ ?ಆ ದೊಡ್ಡ ಕಟ್ಟಡದೊಳಗೆ ಆಗಮಿಸುವ ಎಲ್ಲರನ್ನು ಸ್ವಾಗತಿಸುವುದು ಈ ಗೊಂಬೆ. ನೋಡುಗರಿಗೆ ಖುಷಿ. ಅವನ ಕಣ್ಣಲ್ಲಿ ನೀರು ಬೆವರಿನೊಂದಿಗೆ ಬೆರೆತಿದೆ. ಹಲವಾರು ಜನರು ಬಳಿ ಇವನ ಭಾವಚಿತ್ರವಿದೆ. ಅವರ ಸಂಭ್ರಮಕ್ಕೆ ಇವನ ಜೊತೆಯಾಗಿದ್ದಾನೆ. ರಾತ್ರಿ ಹೊತ್ತು ನಿದ್ದೆ ,ಹೊಟ್ಟೆಗಿಳಿಯೋ ಮುದ್ದೆ ಇದು ಬೇಕಾಗಿರೋದು.
ಆಯಾಸಕ್ಕೆ ಹೊಟ್ಟೆಗೇನೂ ಇಳಿಯುತ್ತಿಲ್ಲ, ಮೈ ಕೈ ನೋವಿನಿಂದ ನಿದ್ದೆ ಬರುತ್ತಿಲ್ಲ. ಇವನ ಬೆವರಿಗೆ ತಕ್ಕಷ್ಟು ಕಾಸು ನೀಡಿದರೆ ಇಷ್ಟೊತ್ತಿಗೆ ಕೋಟ್ಯಾಧಿಪತಿ ಆಗುತ್ತಿದ್ದನೋ ಏನೋ .ದಿನಕ್ಕೊಂದು ವೇಷ ಹೊರಗಿಂದ ಧರಿಸುತ್ತಾನೆ. ಕೆಲವರ ಹಾಗೆ ಒಳಗಿಂದ ಅಲ್ಲವಲ್ಲ.
ಧೀರಜ್ ಬೆಳ್ಳಾರೆ