LATEST NEWS
ದಿನಕ್ಕೊಂದು ಕಥೆ- ಆಸೆ

ಆಸೆ
ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸುವುದು ಹೇಗೆ?.
“ಕಾಲಿಗೆ ಎಳೆದರೆ ತಲೆಗಿಲ್ಲ ತಲೆಗೆ ಎಳೆದರೆ ಕಾಲಿಗಿಲ್ಲ “ಹೀಗೆ ಬದುಕಿದ್ದಾರೆ .ಮಗಳೇ ಮುದ್ದಿನ ಪ್ರಪಂಚ. ಪ್ರತಿಭೆಯೊಂದು ಗೋಡೆ ದಾಟಿ ಹೊರಬರಲು ಅಪ್ಪ ಜೊತೆಯಾಗಿದ್ದಾನೆ. ಅಭ್ಯಾಸವಿದ್ದಾಗ ಕತ್ತಲು ಹೆಚ್ಚಾದರೂ ಕಾಯುತ್ತಾನೆ . ಅವನ ಕಣ್ಣೊಳಗೆ ಮಗಳ ಪ್ರತಿಭೆ ಮಿನುಗಿದೆ.

ವೇದಿಕೆಯಲ್ಲಿ ಪ್ರಶಂಸೆ ಸಿಕ್ಕಾಗ ಕೊನೆಯ ಸೀಟಿನಲ್ಲಿ ಕಣ್ಣೀರಾಗುತ್ತಾನೆ. ಖರೀದಿಗೆ ಉಪವಾಸ ಕೂತಿದ್ದಾನೆ, ಶಿಕ್ಷಣಕ್ಕೆ ಸಾಲ ಹೊತ್ತಿದ್ದಾನೆ, ನಗುವಿನ ಮುಖವಾಡವನ್ನು ಎಂದೋ ಧರಿಸಿದ್ದಾನೆ .ನಿಮಗನ್ನಿಸಬಹುದು ಇದು ಎಲ್ಲಾ ಅಪ್ಪಂದಿರ ಕಥೆ ಅಂತ. ಆದರೆ ಹೀಗಿರೋ ಅಪ್ಪನನ್ನು ಪಡೆಯದ ಮಗಳು ಇರಬಹುದಲ್ಲಾ?” ಅವನು ಆಕಾಶವಾಗಬೇಕು” “ಅವಕಾಶ ನೀಡಬೇಕು” ಮುಳ್ಳಿನ ದಾರಿ ಆಗಬಾರದು!. ಸುಮಿತ್ರ ಇದನ್ನ ಬರೆದಿಟ್ಟು ಮಡಚಿದಳು. ಪೂರ್ಣವಿರಾಮ ಕಣ್ಣೀರಿನೊಂದಿಗೆ ಕರಗಿತು.”ಇನ್ನೂ ಮಲಗಿಲ್ವಾ?” ಅಪ್ಪನ ಜೋರು ಸ್ವರಕ್ಕೆ ಅಲ್ಲೇ ಮುದುಡಿ ಕುಳಿತಳು.