LATEST NEWS
ದಿನಕ್ಕೊಂದು ಕಥೆ- ಅಮಾನುಷ
ಅಮಾನುಷ
ಸರ್ ಚೆಕ್ ಇಟ್ಕೊಳ್ಳಿ .ಸದ್ಯಕ್ಕೆ ಹತ್ತು ಲಕ್ಷ ಬರೆದಿದ್ದೇನೆ. ಆಮೇಲೆ ಖರ್ಚು ಹೆಚ್ಚಾದರೆ ತಿಳಿಸಿ ಕಳಿಸ್ತೇನೆ. ಆಗಾಗ ನನಗೆ ಕರೆ ಮಾಡ್ತಾ ಇರಬೇಡಿ. ಒಂದಷ್ಟು ಕೆಲಸದ ನಡುವೆ ಮುಳುಗಿರುತ್ತೇವೆ. ಇದರ ಮದ್ಯೆ ಇವರು ಹೋಗಿ ಬಿಟ್ರೆ ನೀವೇ ಕಾರ್ಯ ಮುಗಿಸಿ.ಅದಕ್ಕೆ ಎಷ್ಟಾಯಿತು ತಿಳಿಸಿ, ಅದನ್ನು ಕಳುಹಿಸುತ್ತೇನೆ. ಇದು ನನ್ನ ಗೆಳೆಯನೊಬ್ಬನ ಮೊಬೈಲ್ ಸಂಖ್ಯೆ ಅವನು ಆಗಾಗ ಬಂದು ನೋಡ್ಕೊಂಡು ಹೋಗ್ತಾನೆ.
ಮತ್ತೆ ಅವರಿಗೆ ಅವರು ಕಟ್ಟಿದ ಮನೆಯಲ್ಲಿ ಒಬ್ಬರೇ ಇದ್ದರೆ ಏಕಾಂಗಿತನ ಬರಬಹುದು ಅದಕ್ಕೆ ಅವರು ಇಲ್ಲಿ ಅವರ ವಯಸ್ಸಿನವರ ಜೊತೆಗೆ ಬೆರೆಯಲಿ ಅಲ್ವಾ .ಕಿರಿಕಿರಿ ಜಗಳ ಮಾಡುವಂತವರಲ್ಲ. ಅವರ ಪಾಡಿಗೆ ಅವರಿರುತ್ತಾರೆ. ಮತ್ತೆ ನೀವು ಅವರನ್ನು ನಿಮ್ಮ ಸ್ವಂತ ತಂದೆಯ ತರಹ ನೋಡಿಕೊಳ್ಳಬೇಕು. ಅಲ್ಲಾ ಮತ್ತೆ ನಾನು ಮಗನಾಗಿದ್ದು ಅವರಿಗೆ ಇಷ್ಟೂ ಮಾಡದಿದ್ದರೆ ಹೇಗೆ ಅಲ್ವಾ?. ನನಗೆ ಇವತ್ತು ರಾತ್ರಿಯೇ ಅಮೆರಿಕಾಕ್ಕೆ ವಿಮಾನ. ಬರ್ಲಾ ಸರ್.
ಅಪ್ಪಾ ನಾನು ಬರ್ತೇನೆ. ಇವರಿಗೆ ಎಲ್ಲ ಹೇಳಿದ್ದೇನೆ. ಆರಾಮಾಗಿರು…. ಬರ್ಲಾ…!!!!”
ಹಿರಿಯ ಜೀವ ಸುಮ್ಮನೆ ನೋಡುತ್ತಾ.. “ಅವತ್ತು ಜಾತ್ರೆಯಲ್ಲಿ ಕಳೆದು ಹೋದಾಗ ನಾಲ್ಕು ದಿನ ಊಟ ಬಿಟ್ಟು ಊರೂರು ಹುಡುಕಿ ಕೊನೆಗೆ ಸಿಕ್ಕಿದ ಮಗ ಇವೆನೇನಾ?,
“ಸಾರ್ ಊಟಕ್ಕೆ ಬನ್ನಿ ಸಾರ್”
ಅಂದು ಅವನು ಹುಷಾರು ತಪ್ಪಿದಾಗ ಆರೈಕೆಯಲ್ಲಿ ಹಸಿವು ಮರೆತವರಿಗೆ ಇಂದು ಹಸಿವಾಗೋದು ಹೇಗೆ ?
“ಮಗಾ;ನನ್ನನ್ನ ಹೀಗೆ ಬಿಟ್ಟು ಹೋಗಿದ್ದೇನೆ ಅನ್ನೋದನ್ನ ನಿನ್ನ ಮಗನಿಗೆ ಹೇಳಬೇಡ ಅವನು ಇದನ್ನು ಸಂಪ್ರದಾಯ ಅಂದುಕೊಂಡು ಬಿಟ್ಟರೆ ಕಷ್ಟ …..”
ಧೀರಜ್ ಬೆಳ್ಳಾರೆ