LATEST NEWS
ದಿನಕ್ಕೊಂದು ಕಥೆ- ಸ್ಪಂದನೆ
ಸ್ಪಂದನೆ
ಬೆಳಗಿನ ಹೊತ್ತು ನನಗೆ ಇಂದು ಸಿಕ್ಕವರ ಕೆಲವು ಕತೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ . ಇದೆಲ್ಲವೂ ಯಾವುದೋ ಒಂದು ಕೊಂಡಿಗೆ ಬೆಸೆದುಕೊಂಡಿದೆ. ಆ ಕಾರಣ ಜೊತೆಗೂಡಿಸಿದ್ದೇನೆ . ” ಅವಳು ‘ಆಸೆಯೊಂದನ್ನು’ ಎದುರುನೋಡುತ್ತಿದ್ದಾಳೆ, ಕಾಯುವಿಕೆಯ ಮಿತಿಮೀರಿ ಬಯಕೆಯೇ ಅಳಿದು ಹೋದಾಗ ‘ಆಸೆ ‘ ಬರುತ್ತದೆ. ಅದನ್ನ ಸ್ವೀಕರಿಸೋಕೆ ಮನಸ್ಸಾಗದೆ ಕಣ್ಣೀರಿಡುತ್ತಾಳೆ”.
“ಇಲ್ಲೊಬ್ಬಳು ನನ್ನ ನಲ್ಲ ತೋರುವ ಪ್ರೀತಿಗಾಗಿ ಕಾದು, ತನ್ನ ಚೆಲುವನ್ನು ಸವೆಸಿಕೊಂಡು, ಎದೆಯಲ್ಲಿ ಒಲವೊಂದನ್ನು ಮಾತ್ರ ಬಯಸುತ್ತಿದ್ದಳು. ಬದುಕಿನ ಕೊನೆಯ ಕ್ಷಣಕ್ಕಾಗುವಾಗ ಪ್ರಿಯಕರ ಬಂದು ಅವಳ ಆಳವರಿಯದ ಪ್ರೀತಿಯನ್ನು ಅಳೆದು ಹೋಗುತ್ತಾನೆ . ಒಲವ ನದಿ ಧುಮ್ಮಿಕ್ಕುವಾಗ ಕಾಣದಿದ್ದ ಪ್ರೀತಿ ಈಗ ಕಂಡರೇನು ಬಂತು” “ದುಂಬಿಯೊಂದು ಮಕರಂದ ಹೀರಲು ಬಂದು ಹೂವಿನ ಮುಂದೆ ಕಾಯುತ್ತಿದ್ದೆ.
ಮುಗ್ಗು ಅರಳುತ್ತಾನೆ ಇಲ್ಲ. ದುಂಬಿಯು ಕಾದು ಹೂವನ್ನುಬಿಟ್ಟು ಹಾರಿಹೋಯಿತು. ಮತ್ತೆ ಅರಳಿದ ಹೂವು ಏನನ್ನೂ ಹಂಚದೆ ಅಲ್ಲೇ ಬಾಡಿ ಮಣ್ಣೊಳಗೆ ಕರಗಿತ್ತು”. “ಅಣ್ಣಾ, ನನ್ನ ಚಿತ್ರ ನೋಡು ಎಂದವಳು ಬಂದಾಗ ,ನೋಡುತ್ತೇನೆಂದು ಹೇಳಿ ದೂರ ಸರಿದವ ಇನ್ನೊಂದು ದಿನ ‘ಆ ಚಿತ್ರ ಏನಾಯಿತು ಎಂದಾಗ?’ ಚಿತ್ರ ಕಣ್ಣೀರಲ್ಲಿ ಕರಗಿಹೋಗಿ ಆಗಿತ್ತು”.
ಕಾಯಿಸಿ, ಕಾಡಿಸಿ ,ನೋಯಿಸುವುದು ಪ್ರೀತಿಯಲ್ಲ .ತಕ್ಷಣ ಸ್ಪಂದಿಸುವುದು ಕೆಲವೊಮ್ಮೆ ನಮ್ಮಂತಸ್ಥನ್ನ ಕೆಳಗಿಳಿಸುತ್ತದೆ ಅನ್ನುವ ಮಾತು ಸುಳ್ಳು. ಜಾರಿ ಹೋದ ಕಣ್ಣೀರನ್ನು ಮತ್ತೆ ತುಂಬಿಸಿಕೊಳ್ಳಲು ಆಗುವುದಿಲ್ಲ .ನಿರ್ಲಕ್ಷಿಸಿ ಅಪೂರ್ವವಾದುದನ್ನು ಕಳೆದುಕೊಳ್ಳುವುದಕ್ಕಿಂತ, ಬಯಕೆಯ ಬಳ್ಳಿ ಚಿಗುರಿ ನಗುವಾಗ ಹಬ್ಬಲೊಂದು ಮರ ಸಿಕ್ಕರೆ ಬಳ್ಳಿಯ ಉಲ್ಲಾಸವೇ ಬೇರೆ ಅಲ್ಲವೇ…
ಸ್ಪಂದಿಸೋಣ ತಕ್ಷಣವೇ ಸ್ಪಂದಿಸೋಣ..
ಧೀರಜ್ ಬೆಳ್ಳಾರೆ