LATEST NEWS
ದಿನಕ್ಕೊಂದು ಕಥೆ- ಅವನ ಪ್ರಶ್ನೆ
ಅವನ ಪ್ರಶ್ನೆ
ದಿನವೊಂದು ಬರಬೇಕು. ಸೂರ್ಯನ ಬೆಳಕು, ಬೀಸುವ ಗಾಳಿ, ನೆಲದ ಕಂಪು, ಹಸಿರಿನ ಇಂಪು, ಎಲ್ಲವೂ ಎಂದಿನಂತೆ ಇರಬೇಕು. ಕಾಲದ ಗತಿಯೂ ಹೀಗೆ ಇರಬೇಕು. ಪ್ರಾಣಿ-ಪಕ್ಷಿಗಳು ಭಯವಿಲ್ಲದೆ ಬದುಕುತ್ತಿರಬೇಕು. ಇವೆಲ್ಲವೂ ಸಹಜವಾಗಿರುವ ದಿನವೊಂದು ಬರಬೇಕು.
ಜೊತೆಗೆ ವ್ಯವಹರಿಸುವಾಗ, ನನ್ನ ಮುಂದೊಬ್ಬ ಬಂದಾಗ ಅವನೊಂದಿಗಿನ ಕುಶಲೋಪರಿಯಲ್ಲಿ, ಮುಂದಿನ ಕಾರ್ಯಸಾಧನೆಯಲ್ಲಿ ,ನಿಮ್ಮದು ಯಾವೂರು, ನಿಂದೇನು ಕೆಲಸ, ನಿಂಗೆಷ್ಟು ಸಂಬಳ, ಮುಖ್ಯವಾಗಿ ನಿಂದು ಯಾವ ಜಾತಿ ಈ ಯಾವುದೇ ಪ್ರಶ್ನೆಗಳಿಲ್ಲದ ನೇರವಾದ ಮಾತೊಂದು ಹೃದಯದಿಂದ ಬರಬೇಕು. ಇಲ್ಲ ನನಗೆ ಆ ದಿನಗಳು ಸಿಗುತ್ತಿಲ್ಲ. ಜಾತಿ, ಊರು, ಕೆಲಸ, ಸಂಬಳಗಳಿಲ್ಲದ ನೇರ ಮಾತುಕತೆ ಹೃದಯದಿಂದ ಆಗುವುದು ಕಾಣಸಿಗುತ್ತಿಲ್ಲ.
ನಮ್ಮೂರು ,ನಮ್ಮ ಜಾತಿ ,ನಮ್ಮ ಕೆಲಸಕ್ಕೆ ಹೃದಯ ಸ್ವಲ್ಪ ಹೆಚ್ಚೇ ಮಿಡಿಯುತ್ತಿದೆ .ದೊಡ್ಡದೊಂದು ಮಹಾಮಾರಿ ಮಾನವ ಅನ್ನೋದು ಒಂದೇ ವರ್ಗ ಅನ್ನೋದನ್ನ ತೋರಿಸಿಕೊಟ್ಟರೂ ಅದನ್ನ ಆಳಕ್ಕಿಳಿಸಲು ಸಾಧ್ಯವಾಗಲಿಲ್ಲ. ನಾ ಪಡೆದಿರೋ ಪದವಿ ಶಿಕ್ಷಣವು ಈ ವಿಚಾರವನ್ನು ಇನ್ನೂ ನನ್ನೊಳಗೆ ಯಾಕೆ ಇಳಿಸಲಿಲ್ಲ.
ಬರುತ್ತದೆ ಆ ದಿನ ಮುಂದಿರುತ್ತದೆ.
ನೇರವಾದ ಕುಶಲೋಪರಿ ಜಾತಿ ಇಲ್ಲದ ,ಊರು ಕೆಲಸಗಳ ಹಂಗಿಲ್ಲದ ಮಾತುಕತೆ ಮುಂದುವರೆಯುತ್ತದೆ. ಹೀಗೊಂದು ಕೂಗು ನನ್ನೊಳಗಿಂದ ಆಗಾಗ ಎಚ್ಚರಿಸಿ ಬೊಬ್ಬಿರಿಯುತ್ತದೆ. ಅವನನ್ನು ಸಮಾಧಾನ ಮಾಡುವುದು ಹೇಗೆ ಎನ್ನುವುದು ತಿಳಿದಿಲ್ಲ .ಒಂದಾದರೆ ಅವನ ಪ್ರಶ್ನೆಗೆ ಉತ್ತರ ಸಿಗಬೇಕು ,ಇಲ್ಲವಾದರೆ ಅವನ ಬಡಬಡಿಕೆ ಮುಂದುವರೆಯುತ್ತತಾ ಇರಬೇಕು… ನೀವೇನಂತೀರಿ ?…
ಧೀರಜ್ ಬೆಳ್ಳಾರೆ