LATEST NEWS
ದಿನಕ್ಕೊಂದು ಕಥೆ- ವಿದ್ಯುತ್ ಕಂಬ

ವಿದ್ಯುತ್ ಕಂಬ
ನನಗೆ ಇಂತಹದೇ ಒಂದು ರೂಪ ಇರಲಿಲ್ಲ .ಕಾರ್ಖಾನೆ ಒಂದರಲ್ಲಿ ಜಲ್ಲಿ ಸಿಮೆಂಟು ಮಿಶ್ರಣ ಸೇರಿಸಿ ಕಬ್ಬಿಣದ ಸರಳುಗಳನ್ನು ಜೋಡಿಸಿ ಗಟ್ಟಿಯಾಗಿ ನಿರ್ಮಿಸಿದರು. ಅಲ್ಲಿಂದ ಅಗತ್ಯವಿರುವ ಕಡೆಗೆ ಸಾಗಾಟ.
ನನ್ನನ್ನು ಪೇಟೆಗಿಂತ ದೂರ ಹಳ್ಳಿಯೊಂದರ ಮಾರ್ಗದ ಬದಿಯಲ್ಲಿ ಊರಿದರು .ನನ್ನನ್ನು ನೆಲದೊಳಕ್ಕೆ ಇಳಿಸುವಾಗ ಊರ ಜನ ನನ್ನನ್ನು ನೋಡ್ತಾ ಇದ್ರು .ಇಷ್ಟರವರೆಗೆ ಅ ಊರಿಗೆ ನನ್ನಂತವರು ಬಂದಿರಲಿಲ್ಲ ಅಂತ ಕಾಣುತ್ತೆ. ಬೇರೊಬ್ಬನಿಂದ ನನ್ನ ತಲೆಯ ಮೇಲೆ, ಇಲ್ಲಿಂದ ಇನ್ನೊಬ್ಬನಿಗೆ ಹೀಗೆ ತಂತಿಗಳು ಹಾದು ಹೋದವು. ನಾನು ಬೆಳಕನು ಹಂಚುವ ಕಾರ್ಯಕ್ಕೆ ಇಳಿದಿದ್ದೆ.

ದಾರಿ ತೋರಿಸೋಕೆ ನನ್ನೊಂದಿಗೆ ಒಬ್ಬ ಬೆಳಕು ಬೀರುವ ದಂಡಾಧಿಪತಿಯನ್ನು ಜೋಡಿಸಿದರು .ಒಂದಷ್ಟು ಸಮಯ ಬೆಳಕು ನೀಡುತ್ತಾ ಇದ್ದೆವು. ಏನೋ ಸಮಸ್ಯೆ ಉಂಟಾಯಿತು ಅಂತ ಕಾಣುತ್ತೆ .ಜನರಿಗೆ ನಮ್ಮ ಬೆಳಕು ಅತ್ಯವಶ್ಯಕವಾಗಿತ್ತು .ನಾವಿಬ್ಬರೂ ಪ್ರಯತ್ನಪಡುತ್ತಿದ್ದೆವು ಅದು ಸಾಧ್ಯವಾಗಿರಲಿಲ್ಲ. ಬೆಳಕು ಪಲ್ಲಟ ಉಂಟಾಗಿತ್ತಿತ್ತು. ನಮ್ಮೆಲ್ಲ ಶಕ್ತಿ ಪ್ರಯೋಗಿಸಿ ಬೆಳಕು ನೀಡೋಕೆ ಪ್ರಯತ್ನಿಸಿದೆವು ಆಗುತ್ತಿಲ್ಲ. ನೋವು ಕಾಡುತ್ತಿದೆ.
ಮೊದಲೊಮ್ಮೆ ನಮ್ಮನ್ನ ಇಲ್ಲಿ ನೆಲದೊಳಕ್ಕೆ ಇಳಿಸಿ ಹೋದವರು ಆನಂತರ ಮತ್ತೆ ತಿರುಗಿ ನೋಡೋಕೆ ಬಂದಿಲ್ಲ. ಅಲ್ಲಲ್ಲಿ ನಮ್ಮ ಮೇಲೆ ಹಸಿರು ಹಬ್ಬಿ ನಿಂತಿದೆ .ನನ್ನ ಭದ್ರತೆಯ ಬಗ್ಗೆ ನನಗೆ ಭಯ ಉಂಟಾಗಿದೆ. ಹಳ್ಳಿ ಅನ್ನುವ ತಿರಸ್ಕಾರವೋ ಗೊತ್ತಿಲ್ಲ. ನಮ್ಮ ಮೇಲಿನಿಂದ ಹಾದುಹೋದ ತಂತಿಯ ಮೂಲಕ ಸುದ್ದಿ ತಲುಪಿಸಿದೆ ಆದರೂ ಸದ್ದಿಲ್ಲ.
ಜನರ ಪಾದದಡಿಗೆ ಬೆಳಕು ಇರೋಕೆ ಸಾಧ್ಯವಾಗದ ಸ್ಥಿತಿ ನಮ್ಮದು. ನೆಲದಡಿಯಿಂದ ಎಷ್ಟೇ ಎತ್ತರಕ್ಕೆ ಮೇಲೆದ್ದು ನಿಂತರು ನಮ್ಮ ಕಾರ್ಯ ಮಾಡೋಕೆ ಸಾಧ್ಯವಾಗುತ್ತಿಲ್ಲ .ಸುದ್ದಿ ತಲುಪಿಸುವವರು ಇಲ್ಲವೋ ,ತಲುಪಿದರೂ ಅಸಡ್ಡೆಯೋ ಗೊತ್ತಿಲ್ಲ. ಬೆಳಕು ನೀಡಲಾಗುತ್ತಿಲ್ಲ.
ನನ್ನನ್ನು ಊರಿ ಮೇಲೊಂದು ತಂತಿ ಹಾದುಹೋದ ಮಾತ್ರಕ್ಕೆ ಊರಿಗೆ ಉಪಕಾರವಾಗುತ್ತದೆ ಎಂದು ಅಂದುಕೊಂಡಿರಬಹುದು, ಆದರೆ ಆಗಾಗ ಬಂದು ನೋಡುತ್ತಾ ಹೋದರೆ ನನಗೂ ಒಳಿತು ಊರಿಗೂ ಒಳಿತಲ್ಲವಾ……ನನ್ನ ಮಾತು ಯಾರಿಗೂ ಕೇಳುತ್ತಿಲ್ಲವಾ?
ಧೀರಜ್ ಬೆಳ್ಳಾರೆ