LATEST NEWS
ದಿನಕ್ಕೊಂದು ಕಥೆ- ರುಚಿ

ರುಚಿ
ಕಾಲೇಜಿಗೆ ತಲುಪಲು ಬಸ್ಸಿನ ವ್ಯವಸ್ಥೆ ಇಲ್ಲ. ನಡೆದೇ ಹೊರಟಿದ್ದೆ. ಉಡುಪಿ ದ್ವಾರಕ್ಕೆ ತಲುಪಲು100 ಮೀಟರ್ ಇದೆ ಅನ್ನೋ ಮೊದಲೇ ದಾರಿಬದಿ ಅವನೊಬ್ಬ ಒಂದಷ್ಟು ಜನರಿಗೆ ಬೊಧಿಸುತ್ತಿದ್ದ. ಜನ ಸೇರಿತ್ತು. ಅವನ ಮಾತು ಕೇಳಿಯೋ ಅಥವಾ ಕಾಲಹರಣಕ್ಕೋ ಗೊತ್ತಿಲ್ಲ.
ಅವರ ಜೊತೆ ನಾನೂ ಒಬ್ಬನಾದೆ. ಅದಕ್ಕಿಂತ ಮುಂಚೆ ಏನು ಮಾತನಾಡುತ್ತಿದ್ದರು ಗೊತ್ತಿಲ್ಲ .”ಈ ರುಚಿ ಅನ್ನೋದು ನಾಲಿಗೆಯಲ್ಲಿ ಇಲ್ಲ ಮಗೂ, ನಿನಗೆ ಅದನ್ನು ವ್ಯರ್ಥವಾಗಿ ಬೋಧಿಸಿದ್ದಾರೆ. ನೀನದನ್ನ ಒಪ್ಪಿಕೊಂಡಿದ್ದೀಯಾ. ರುಚಿ ಅನ್ನೋದು ಹಸಿವಿನಲ್ಲಿ ಇರುವುದು.

ಯಾಕೆ ಗೊತ್ತಾ, ಸಿಹಿ ,ಹುಳಿ ,ಖಾರ ,ಒಗರು ಎಲ್ಲವೂ ರುಚಿಸಬೇಕಾದರೆ ಹಸಿದಿರಬೇಕು. ಹಸಿವಿಲ್ಲದಿದ್ದರೆ ಅದ್ಯಾವುದೂ ರುಚಿಸುವುದಿಲ್ಲ. ನಿನಗಿಷ್ಟವಾದ ಮಾವಿನಹಣ್ಣು ಜೋರು ಹಸಿವೆಯಾದಾಗ 4 ಹೊಟ್ಟೆಗೆ ಇಳಿಯಬಹುದು. ಹತ್ತಕ್ಕೆ ತಲುಪಿದಾಗ ಮೊದಲ ಹಣ್ಣಿನ ರುಚಿ ಇರೋದಿಲ್ಲ.
ಯಾಕೆಂದರೆ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಹಸಿವೆಯನ್ನು ಜೀವಂತವಾಗಿಟ್ಟುಕೋ , ಆಗ ಎಲ್ಲವೂ ರುಚಿಸುತ್ತದೆ. ಯಾವತ್ತೂ ಪೂರ್ತಿ ತುಂಬಿಸಿಕೊಳ್ಳಬೇಡ. ಇದನ್ಯಾರು ತಿಳಿಸುವುದಿಲ್ಲ. ಇದು ಮೂರ್ಖನ ಮಾತು ಅಂದುಕೋ. ರುಚಿ ಇರೋದು ಹಸಿವೆಯಲ್ಲಿ. ಹಸಿವನ್ನು ಜೀವಂತವಾಗಿರಿಸಿಕೋ, ಎಲ್ಲದರಲ್ಲಿಯೂ ?” ಮತ್ತೆ ಮೌನವಾದ ಜನ ದೂರ ಹೋದರು. ನಾನು ಅದೇ ಯೋಚನೆಯಲ್ಲಿ ಕಾಲೇಜಿನ ಕಡೆಗೆ ನಡೆದೆ. ನನ್ನೋಳಗೆ ಓಡುವ ಅದೇ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದೇನೆ ಈ ರುಚಿ ಇರೋದೆಲ್ಲಿ?
ಧೀರಜ್ ಬೆಳ್ಳಾರೆ